ಬಳ್ಳಾರಿ: 'ನಾನಂತೂ ಪ್ರಶಸ್ತಿ ಹಿಂಬಾಲಿಸಿ ಹೋದವಳಲ್ಲ. ಹಿರಿಯ ನಾಗರಿಕರ ಲಾಲನೆ - ಪಾಲನೆಯ ಸೇವೆಯಲ್ಲಿ ಸತತ ಎರಡು ದಶಕದಿಂದಲೂ ತೊಡಗಿಸಿಕೊಂಡಿರುವೆ. ಅದರಲ್ಲೇ ನಾನು ಖುಷಿ ಕಂಡುಕೊಂಡಿರುವೆ.' ಇದು 2020 ನೆ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಡಾ. ಎ. ನಾಗರತ್ನ ಅವರ ಮನದಾಳದ ಮಾತು.
ತಾಲೂಕಿನ ಸಂಗನಕಲ್ಲು ಗ್ರಾಮದ ಕೃಷ್ಣ ಸನ್ನಿಧಿಯಲ್ಲಿರುವ ಹಿರಿಯ ನಾಗರಿಕರ ಸೇವಾಶ್ರಮದಲ್ಲಿ ಮಾತನಾಡಿದ ಅವರು, ಸತತ ಎರಡು ದಶಕದಿಂದಲೂ ನಾನು ಹಿರಿಯ ನಾಗರಿಕರ ಲಾಲನೆ - ಪಾಲನೆಯ ಜೊತೆಜೊತೆಗೆ ಆರೋಗ್ಯದ ಸೇವೆಯನ್ನೂ ಮಾಡುತ್ತಿರುವೆ. ಆರೋಗ್ಯಧಾಮ ಎಂಬ ಹೆಸರಿನಡಿ ಹಿರಿಯ ನಾಗರಿಕರ ಆರೋಗ್ಯವನ್ನ ವಿಚಾರಿಸಿಕೊಳ್ಳುತ್ತಾ ಬಂದಿರುವೆ. ನಾನು ಈ ಸೇವಾಶ್ರಮಕ್ಕೆ ಬಂದರೆ ಸಾಕು, ಹಿರಿಯ ನಾಗರಿಕರ ಆರೈಕೆಗೆ ಮೊದಲ ಆದ್ಯತೆ ಕೊಡುವೆ ಎಂದರು.
ಈ ಹಿರಿಯ ನಾಗರಿಕರ ಸೇವಾಶ್ರಮ ತೆರೆಯಲು ನನಗೆ ನನ್ನ ತಂದೆಯೇ ಸ್ಫೂರ್ತಿಯಾಗಿದ್ದಾರೆ. ಅವರನ್ನ ನೋಡಿ ನಾನು ಕಲಿತುಕೊಂಡೆ ಎಂದ ನಾಗರತ್ನ, ನಾನಂತೂ ಯಾವ ಪ್ರಶಸ್ತಿಯ ಹಿಂದೆ ಬಿದ್ದವಳಲ್ಲ. ನನ್ನ ಪ್ರಾಮಾಣಿಕ ಸೇವೆಯನ್ನ ಸಾರ್ವಜನಿಕರು ಹಾಗೂ ಈ ಸರ್ಕಾರ ಗುರುತಿಸಿ ಇಷ್ಟೊಂದು ದೊಡ್ಡ ಪ್ರಶಸ್ತಿಯನ್ನ ನನ್ನ ಮುಡಿಗೇರಿಸಿದೆ. ಪ್ರಶಸ್ತಿ ಹಿಂದೆ ಬಿದ್ದರೆ ಇಷ್ಟೊಂದು ಅಚ್ಚುಕಟ್ಟಾಗಿ ಈ ಹಿರಿಯ ನಾಗರಿಕರ ಸೇವಾಶ್ರಮ ನಡೆಸಲಿಕ್ಕೆ ಆಗೋಲ್ಲ ಎಂದು ಹೇಳಿದರು.
ಈ ಕುರಿತು ಮಾತನಾಡಿದ ಕೃಷ್ಣ ಸನ್ನಿಧಿ ಸೇವಾಶ್ರಮದ ಸೇವಕಿ ರತಿ ಕಪಾಡಿಯಾ, ವೈದ್ಯೆ ಡಾ. ನಾಗರತ್ನ ಅವರೊಂದಿಗೆ ನಾನು ಕೂಡ ಸತತ ಎರಡು ದಶಕದಿಂದಲೂ ಕಾರ್ಯನಿರ್ವಹಿಸುತ್ತಿರುವೆ. ನನಗಂತೂ ಈ ಹಿರಿಯ ನಾಗರಿಕರ ಸೇವೆಯಲ್ಲಿ ತೊಡಗಿಸಿಕೊಳ್ಳೋದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಹೀಗಾಗಿ, ಈ ಸೇವಾಶ್ರಮದ ಮುಖ್ಯಸ್ಥೆ ಡಾ.ನಾಗರತ್ನ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರೋದು ಇಡೀ ಸೇವಾಶ್ರಮಕ್ಕೆ ದೊಡ್ಡ ಪ್ರಶಸ್ತಿಯ ಗರಿ ದೊರೆತಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.