ಬಳ್ಳಾರಿ: ಸದ್ಯದ ರಾಜಕಾರಣ ನನಗೆ ವೈಯಕ್ತಿಕವಾಗಿ ಬೇಸರ ತಂದಿದೆ ಎಂದು ಜನತಾದಳ (ಜಾತ್ಯತೀತ) ಪಕ್ಷದ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿಯ ನಕ್ಷತ್ರ ಹೊಟೇಲ್ನಲ್ಲಿಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ರಾಜಕಾರಣದಲ್ಲಿ ನನಗಾದ ಅನುಭವ ಹಂಚಿಕೆ ಮಾಡಿಕೊಂಡ್ರೇ ಅದನ್ನ ಕೇಳೋ ವ್ಯವಧಾನವೂ ಕೂಡ ಇಂದಿನ ಆಳ್ವಿಕೆ ಸರ್ಕಾರಗಳಿಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ, ಈ ರಾಜಕಾರಣವೇ ನನಗೆ ಬೇಸರ ಮೂಡಿಸಿದೆ. ಇಲ್ಲಿ ಪ್ರಾಮಾಣಿಕರಿಗೆ, ನಿಷ್ಠಾವಂತರಿಗೆ ಉಳಿಗಾಲವೇ ಇಲ್ಲದಂತಾಗಿದೆ. ಮುಂದಿನ ರಾಜಕಾರಣದ ಪರಿಸ್ಥಿತಿಯನ್ನ ಊಹಿಸಿಕೊಂಡ್ರೆ ಸಾಕು. ಒಂದು ಕ್ಷಣ ಮೈಜುಮ್ಮೆನ್ನುತ್ತೆ ಎಂದರು.
ಇಂದಿನ ಚುನಾವಣಾ ರಾಜಕಾರಣ ಭಯ ಹುಟ್ಟಿಸುವಂತಿದೆ. ಇದು ಯಾವ ಮಟ್ಟಕ್ಕೆ ಹೋಗುತ್ತಿದೆಯೋ ನನಗಂತೂ ಗೊತ್ತಿಲ್ಲ ಎಂದು ಹೊರಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಯಾರಿಗೂ ಬೇಡವಾದ ಇಲಾಖೆ. ಇದು ಎಲ್ಲ ಸರ್ಕಾರಕ್ಕೆ ಅನ್ವಯ ಆಗುತ್ತೆ. ವಿದ್ಯಾಗಮದಿಂದ ಶೇ 5ರಷ್ಟು ವಿದ್ಯಾರ್ಥಿಗಳು ಪಾಠ ಕಲಿತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ಕೋವಿಡ್ ಸೋಂಕಿನಿಂದ 72 ಮಂದಿ ಶಿಕ್ಷಕರು ಸಾವನ್ನಪ್ಪಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳೇ ಇರಲಿಲ್ಲ ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೂ ಟಾಂಗ್ ಕೊಟ್ರು. ವಿಧಾನ ಪರಿಷತ್ತಿನ ಘನತೆ ಗೌರವ ಉಳಿದಿಲ್ಲ. ಪರಿಷತ್ತಿನಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದು ಬೇಸರದ ಸಂಗತಿ. ಮರ್ಯಾದೆ ಇದ್ದವರು ರಾಜಕೀಯದಲ್ಲಿ ಇರಬೇಕೋ ಬೇಡ್ವೋ ಅನ್ನೋ ಚಿಂತನೆ ನಡೆತಿದೆ. ಸಮ್ಮಿಶ್ರ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸಿದ್ದು ಬೇಸರ ತಂದಿದೆ ಎಂದರು.
ನನ್ನನ್ನ ಶಿಕ್ಷಣ ಮಂತ್ರಿ ಮಾಡಿದ್ರೇ ಸಾಕಷ್ಟು ಕೆಲಸ ಮಾಡುತ್ತಿದ್ದೆ. ಆದ್ರೆ ಮಾಡಲಿಲ್ಲ. ಹೀಗಾಗಿ, ಈ ರಾಜಕಾರಣವೇ ಬೇಸರವಾಗಿದೆ. ಆದ್ರೇ ಚುನಾವಣೆಗೆ ನಿಲ್ಲಲ್ಲವೆಂದು ಹೇಳೋಕೆ ಆಗ್ತಿಲ್ಲ. ಆದ್ರೇ ದೇವೇಗೌಡರಿಗೆ ರಾಜ್ಯದ ಬಗ್ಗೆ ಕಾಳಜಿ ಇದೆ. ದೇವೇಗೌಡರ ಮೇಲೆ ನನಗೆ ವಿಶ್ವಾಸವಿದೆ ಎಂದು ತಿಳಿಸಿದರು.