ಬಳ್ಳಾರಿ: ಗಂಡನ ಮನೆಯ ಕಿರುಕುಳ ತಾಳಲಾರದೆ ತಾಯಿ-ಮಗಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುರುಗೋಡು ತಾಲೂಕಿನ ಹಳೆ ನೆಲ್ಲುಡಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಕುರುಗೋಡು ತಾಲೂಕಿನ ಹಳೆ ನೆಲ್ಲುಡಿ ಗ್ರಾಮದ ನಿವಾಸಿ ಶಾಂತಮ್ಮ (28), ಪುತ್ರಿ ವರಲಕ್ಷ್ಮಿ (6) ಮೃತಪಟ್ಟಿದ್ದು, ಮತ್ತೋರ್ವ ಪುತ್ರಿ ನೇತ್ರಾವತಿ (4) ಚಿಕಿತ್ಸೆ ಪಡೆಯುತ್ತಿದ್ದಾಳೆ.
ಘಟನೆಯ ವಿವರ: ಕಳೆದ ಒಂಭತ್ತು ವರ್ಷಗಳ ಹಿಂದಷ್ಟೇ ಹೊಸಪೇಟೆ ತಾಲೂಕಿನ ರಾಮಸಾಗರದ ನಿವಾಸಿಯಾಗಿದ್ದ ಶಾಂತಮ್ಮ ಅವರನ್ನು ಹಳೆ ನೆಲ್ಲುಡಿ ಗ್ರಾಮದ ಕೃಷಿ ಕಾರ್ಮಿಕ ಮರೆಪ್ಪ ಎಂಬುವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಅಂದಿನಿಂದ ಈವರೆಗೂ ಶಾಂತಮ್ಮನವರ ಗಂಡ ಮರೆಪ್ಪ ಹಾಗೂ ಆತನ ತಂದೆ, ತಾಯಿ ಕಿರುಕುಳ ನೀಡುತ್ತಿದ್ದರಂತೆ. ಅದರ ಮಧ್ಯೆಯೇ ಅವರಿಬ್ಬರ ಸಾಂಸಾರಿಕ ಜೀವನದಲ್ಲಿ ಇಬ್ಬರು ಪುತ್ರಿಯರಿಗೆ ಶಾಂತಮ್ಮ ಜನ್ಮ ನೀಡಿದ್ದರು. ಗಂಡ, ಅತ್ತೆ, ಮಾವನ ಕಿರುಕುಳಕ್ಕೆ ಮನನೊಂದ ಶಾಂತಮ್ಮ ನಿನ್ನೆ ರಾತ್ರಿ ಏಕಾಏಕಿ ತನ್ನ ಇಬ್ಬರು ಪುತ್ರಿಯರಿಗೆ ಕ್ರಿಮಿನಾಶಕ ಕುಡಿಸಿದ್ದಲ್ಲದೇ, ತಾವೂ ಕೂಡ ಕ್ರಿಮಿನಾಶಕ ಸೇವಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ತಾಯಿ ಹಾಗೂ ಇಬ್ಬರು ಪುತ್ರಿಯರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮತ್ತು ಪುತ್ರಿಯೋರ್ವಳು ಸಾವನ್ನಪ್ಪಿದ್ದಾರೆ. ಎರಡನೇಯ ಪುತ್ರಿ ನೇತ್ರಾವತಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ಕುರುಗೋಡು ಠಾಣೆಯ ಪೊಲೀಸರು ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಠಾಣೆಯ ಮೆಟ್ಟಿಲೇರಿದ ತಾಯಿ: ಹೆತ್ತ ಮಗಳಿಗೆ ಕಿರುಕುಳ ನೀಡಿ ಕ್ರಿಮಿನಾಶಕ ಸೇವನೆಗೆ ಪ್ರೇರೇಪಿಸುವಂತೆ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಅಳಿಯನ ಕುಟುಂಬದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮೃತ ಶಾಂತಮ್ಮನ ತಾಯಿ ಅಂಕಲಮ್ಮ ಕುರುಗೋಡು ಠಾಣೆಯ ಮೆಟ್ಟಿಲೇರಿದ್ದಾರೆ.