ಬಳ್ಳಾರಿ: ಸಾಲಬಾಧೆಗೆ ಹೆದರಿದ ಪತಿರಾಯ, ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೆರೆಗೆ ದೂಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯಿಂದ ಸ್ವಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ಇರುವ ರಾಮದುರ್ಗ ಕೆರೆಯ ಬಳಿ ಬೈಕ್ ನಿಲ್ಲಿಸಿದ ಚಿರಂಜೀವಿ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೆರೆಗೆ ದೂಡಿದ್ದಾನೆ. ಜಿಲ್ಲೆಯ ಕೊಟ್ಟೂರು ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ನಿವಾಸಿ ಚಿರಂಜೀವಿ ಕರೆಗೆ ದೂಡಿದ ಪತಿರಾಯ. ಘಟನೆಯಲ್ಲಿ ಪತ್ನಿ ಬದುಕುಳಿದಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಶವಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಚಿರಂಜೀವಿ ಹಾಗೂ ನಂದಿನಿ ಮದುವೆಯಾಗಿದ್ದರು. ಕುಟುಂಬ ನಿರ್ವಹಣೆ ಹಾಗೂ ಇನ್ನಿತರ ಚಟುವಟಿಕೆ ನಡೆಸುವ ಸಲುವಾಗಿ ಖಾಸಗಿ ಲೇವಾದೇವಿಗಾರರಿಂದ ಸಾಲ ಪಡೆದುಕೊಂಡಿದ್ದರು. ಅದನ್ನ ತೀರಿಸಲಾಗದೇ ಸಂಕಷ್ಟಪಡುತ್ತಿದ್ದರು. ಇನ್ನು ಮಂಗಳವಾರದಂದು ಸಂಬಂಧಿಕರ ಮದುವೆ ಸಮಾರಂಭ ಮುಗಿಸಿಕೊಂಡು ಬರುವಾಗ ಚಿರಂಜೀವಿ ಈ ಕೃತ್ಯ ಎಸಗಿದ್ದಾನೆ.
ಘಟನೆ ನಡೆದ ತಕ್ಷಣ ಚಿರಂಜೀವಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಗುಡೇಕೋಟೆ ಪಿಎಸ್ಐ ರಾಮಪ್ಪ ನೇತೃತ್ವದ ತಂಡ ದೌಡಾಯಿಸಿದ್ದು, ಮಕ್ಕಳ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ. ಈ ಕುರಿತು ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.