ವಿಜಯನಗರ: ದಂಪತಿ ನಡುವಿನ ಕಲಹ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ವರದಾಪುರ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಲಕ್ಷ್ಮೀ (33) ಕೊಲೆಯಾದ ಮಹಿಳೆ. ಗಂಡ ಭಂಗಿ ಮಲ್ಲಪ್ಪ (40) ಕೊಲೆ ಆರೋಪಿ.
ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪದಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಗಂಡ-ಹೆಂಡತಿ ನಡುವೆ ಯಾವ ಕಾರಣಕ್ಕೆ ಜಗಳವಾಗಿದೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಿದೆ. ಆರೋಪಿಯನ್ನು ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಗೆಳತಿಯನ್ನು ಕೊಂದು ಪರಾರಿ: ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಿವ್- ಇನ್ ರಿಲೇಷನ್ಶಿಪ್ನಲ್ಲಿದ್ದ ಗೆಳತಿಯನ್ನು ಕೊಂದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಕಳೆದ ಮೂರು ದಿನಗಳ ಹಿಂದಷ್ಟೇ ಬಂಧಿಸಿದ್ದಾರೆ. ಮಂಡ್ಯ ಮೂಲದ ಕೌಸರ್ ಮುಬೀನಾ ಅವರನ್ನು ಹತ್ಯೆ ಮಾಡಿದ ಆರೋಪದಡಿ ಲಿವಿಂಗ್ ರಿಲೇಷನ್‌ನಲ್ಲಿದ್ದ ನದೀಂ ಪಾಷನನ್ನು ಬಂಧಿಸಲಾಗಿದೆ. ಕೌಸರ್ ಹಾಗೂ ನದೀಂ ಪಾಷ ಇಬ್ಬರೂ ಈ ಹಿಂದೆ ಪ್ರತ್ಯೇಕವಾಗಿದ್ದು, ದಾಂಪತ್ಯದಿಂದ ದೂರವಾಗಿದ್ದರು. ದೂರದ ಸಂಬಂಧಿಕರಾಗಿದ್ದ ಕೌಸರ್‌ನೊಂದಿಗೆ ನಾಲ್ಕು ವರ್ಷಗಳ ಹಿಂದೆ ಪರಿಚಯವಾಗಿ ಕಳೆದೊಂದು ವರ್ಷದಿಂದ ನದೀಂ ಆಕೆಯ ಜೊತೆಯಲ್ಲಿ ವಾಸವಾಗಿದ್ದ. ಬರ್ತ್ ಡೇ ದಿನ ಬೆಳ್ಳಿ ಚೈನ್ ಗಿಫ್ಟ್ ಪಡೆದ ಕೌಸರ್, ಚಿನ್ನದ ಸರ ಕೊಡಬೇಕಿತ್ತು ಎಂದಿದ್ದಾಳೆ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ವೈಮನಸ್ಸು ಮೂಡಿ ಗಲಾಟೆಗೆ ಕಾರಣವಾಗಿತ್ತು. ಕಳೆದ ಸೋಮವಾರ ಮನೆಗೆ ಬಂದಿದ್ದಾಗ ಇಬ್ಬರ ನಡುವೆ ಮತ್ತೆ ಗಲಾಟೆ ತಾರಕಕ್ಕೇರಿದೆ. ಈ ವೇಳೆ, ಕೋಪದಿಂದ ಮನೆಯಲ್ಲಿದ್ದ ಚಾಕು ಹಿಡಿದು ಆಕೆ ಕುತ್ತಿಗೆ ಸೀಳಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ.
ಇದನ್ನೂ ಓದಿ: ಅಡುಗೆ, ಮನೆಗೆಲಸದ ವಿಚಾರಕ್ಕೆ ಕಲಹ.. ಮದುವೆ ವಾರ್ಷಿಕೋತ್ಸವದಂದೇ ಪತ್ನಿ ಕೊಂದ ಪತಿ!
ಮನೆಗೆಲಸದ ವಿಚಾರಕ್ಕೆ ಕಲಹ: ಕಳೆದ ವರ್ಷದ ಮೇ 15 ರಂದು ಮದುವೆ ವಾರ್ಷಿಕೋತ್ಸವದ ದಿನದಂದೇ ದಂಪತಿ ನಡುವೆ ಕಲಹ ನಡೆದು, ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಗುರುಮಠಕಲ್ ತಾಲೂಕಿನ ಗೋಪಾಳಪುರ ಗ್ರಾಮದಲ್ಲಿ ನಡೆದಿತ್ತು. ಅಡುಗೆ ಹಾಗೂ ಮನೆ ಕೆಲಸದ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಬಳಿಕ ಮನೆಯಲ್ಲೇ ಪತ್ನಿಗೆ ನೇಣು ಹಾಕಿ ಕೊಲೆಗೈದು, ಪತಿ ಪರಾರಿಯಾಗಿದ್ದ. ಭೀಮರಾಯ ಎಂಬಾತ ಕೊಲೆ ಆರೋಪಿಯಾಗಿದ್ದು, ಪತ್ನಿ ಪಾರ್ವತಿ ಕೊಲೆಗೀಡಾದ್ದಳು.
ಇದನ್ನೂ ಓದಿ: ಅನುಕಂಪದ ನೌಕರಿಯ ಆಸೆ.. ಪತಿಯನ್ನೇ ಮುಗಿಸಿದ ಪತ್ನಿ!
ಸರ್ಕಾರಿ ನೌಕರಿಗಾಗಿ ಕೊಲೆ: ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಪಡೆಯಲು ಪತಿಯನ್ನೇ ಪತ್ನಿ ಕೊಲೆಗೈದ ಘಟನೆ ತೆಲಂಗಾಣದ ಚುಂಚುಪಲ್ಲಿಯಲ್ಲಿ ಕಳೆದ ತಿಂಗಳ ಜನವರಿ 6ರಂದು ಬೆಳಕಿಗೆ ಬಂದಿತ್ತು. ಮೃತರನ್ನು ಚುಂಚುಪಲ್ಲಿ ಜಿಲ್ಲೆಯ ಗಾಂಧಿ ಕಾಲೋನಿ ನಿವಾಸಿ ಕೊಮ್ಮಾರಬೋನ ಶ್ರೀನಿವಾಸ್ (50) ಎಂದು ಗುರುತಿಸಲಾಗಿತ್ತು.