ಬಳ್ಳಾರಿ: ಜಿಲ್ಲಾದ್ಯಂತ ಕಳೆದ ಎರಡು ದಿನಗಳಿಂದಲೂ ಸುರಿದ ಜಿಟಿ ಜಿಟಿ ಮಳೆಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ನಾನಾ ಗ್ರಾಮಗಳಲ್ಲಿನ ಕಚ್ಚಾ ಮನೆಗಳು ಭಾಗಶಃ ಕುಸಿದಿವೆ.
ತಂಬ್ರಹಳ್ಳಿ ಹಾಗೂ ಬನ್ನಿಕಲ್ಲು ಗ್ರಾಮಗಳಲ್ಲಿನ ತಲಾ ಒಂದೊಂದು ಮನೆ ಭಾಗಶಃ ಕುಸಿದಿವೆ. ಆದರೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಳೆದ ವಾರ ಸುರಿದ ಮಹಾಮಳೆಗೂ ತಾಲೂಕಿನ ನಾನಾ ಗ್ರಾಮಗಳಲ್ಲಿನ ನಾಲ್ಕಾರು ಮನೆ ಕುಸಿದು ಬಿದ್ದ ವರದಿಯಾಗಿವೆ.
ಕಳೆದ ಆಗಸ್ಟ್ ತಿಂಗಳ ಕೊನೆಯ ವಾರ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿಯುತ್ತಿರುವ ಮಳೆಗೆ, ರೈತರು ಬೆಳೆದ ಈರುಳ್ಳಿ ಬೆಳೆಗೆ ಕೊಳೆರೋಗ ಬಂದು ಸಂಪೂರ್ಣ ಬೆಳೆನಷ್ಟವಾಗಿದೆ. ತಾಲೂಕಿನ ಹಂಪಸಾಗರ, ಮೊರಗೆರೆ, ಸೊನ್ನ, ಬನ್ನಿಕಲ್ಲು, ಮಾಲವಿ, ಕೋಗಳಿ, ಬೆಣಕಲ್ಲು, ಹನಸಿ, ಹಂಪಾಪಟ್ಟಣ, ಮರಬ್ಬಿಹಾಳ್, ವರದಾಪುರ, ಕಡಲಬಾಳು, ಬಾಚಿಗೊಂಡನಹಳ್ಳಿ, ತಂಬ್ರಹಳ್ಳಿ ಮತ್ತು ಮುತ್ಕೂರು ಹಾಗೂ ಪಟ್ಟಣವೂ ಸೇರಿ ಈ ಎಲ್ಲಾ ಭಾಗಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.
ಹಗರಿಬೊಮ್ಮನಹಳ್ಳಿ ತಾಲೂಕಿನ ಮಳೆ ಮಾಹಿತಿ : ಹಗರಿಬೊಮ್ಮನಹಳ್ಳಿ-28.6 ಮಿ.ಮೀ, ಹಂಪಸಾಗರ-40.4 ಮಿ.ಮೀ, ಕೋಗಳಿ-15.2 ಮಿ.ಮೀ, ಮಾಲವಿ-25.4 ಮಿ.ಮೀ, ತಂಬ್ರಹಳ್ಳಿ-36.8 ಮಿ.ಮೀನಷ್ಟು ಮಳೆಯಾಗಿ ಈ ತಾಲೂಕಿನಲ್ಲಿ ಒಟ್ಟು ಸರಾಸರಿ 29.28 ಮಿ.ಮೀ ಮಳೆಯಾಗಿದೆ.