ಹೊಸಪೇಟೆ : ತಾಲೂಕಿನ ಮರಿಯಮ್ಮನಹಳ್ಳಿಯ ಕಬ್ಬಿನ ಬೆಳೆಗೆ ಕರಡಿ, ಕಾಡುಹಂದಿಗಳ ಕಾಟ ಹೆಚ್ಚಾಗಿದ್ದರಿಂದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ.
ಈಗಾಗಲೇ ಕಬ್ಬು ಕಟಾವಿಗೆ ಬಂದಿದೆ. ಗುಂಡಾ, ಗೊಲ್ಲರಹಳ್ಳಿ, ಚಿಲಕನಹಟ್ಟಿ, ಹಾರುವನಹಳ್ಳಿ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಮೆಕ್ಕೆಜೋಳ, ಜೋಳದ ಬೆಳೆಗಳು ಹಾಳಾಗಿವೆ. ಸಮೀಪದ ನಂದಿಬಂಡಿ ಗ್ರಾಮದ ಬಳಿಯ ಕೆಲ ಜಮೀನುಗಳಲ್ಲಿನ ಹತ್ತಾರು ಎಕರೆ ಕಬ್ಬು ಬೆಳೆಯನ್ನು ಕಾಡು ಪ್ರಾಣಿಗಳು ಹಾಳು ಮಾಡಿವೆ. ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡುಪ್ರಾಣಿಗಳ ಹಾವಳಿ ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದರು.
ಈ ವೇಳೆ ಸಿಗೇನಹಳ್ಳಿ ರೈತ ನಾಗರಾಜ ಮಾತನಾಡಿ, ಕಾಡು ಪ್ರಾಣಿಗಳ ದಾಳಿಗೆ ದಿಕ್ಕು ತೋಚದಂತಾಗಿದೆ. ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ರಾತ್ರಿ ವೇಳೆ ಕಾವಲು ಇರಬೇಕಾಗಿದೆ. ಅರಣ್ಯ ಇಲಾಖೆ ಅವರು ಕಾಡುಪ್ರಾಣಿಗಳ ಹಾವಳಿ ತಪ್ಪಿಸಿ, ಬೆಳೆಗಳನ್ನು ಉಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು. ಆರ್‌ಎಫ್‌ಒ ವಿನಾಯಕ ಅವರು ಮಾತನಾಡಿ, ರೈತರಿಗೆ ಬೆಳೆಗಳ ನಷ್ಟಕ್ಕೆ ತಕ್ಕಂತೆ ಪರಿಹಾರ ನೀಡಲಾಗುವುದು.
ಈಗ ರೈತರು ಆನ್‌ಲೈನ್ ಮೂಲಕ ಬೆಳೆ ನಷ್ಟದ ಫೋಟೋಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಗ ರೈತರ ಖಾತೆಗೆ ಪರಿಹಾರ ನೇರ ಜಮೆ ಆಗುತ್ತದೆ. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿ ಎಕರೆಗೆ ಬೆಳೆ ಪರಿಹಾರ ನಿಗದಿ ಮಾಡುತ್ತಾರೆ. ಅದರಂತೆ ಪರಿಹಾರ ನೀಡಲಾಗುವುದು. ಇಲಾಖೆಯ ಸಿಬ್ಬಂದಿಗೆ ತಿಳಿಸಿ ಕರಡಿ ರಾತ್ರಿ ವೇಳೆಯಲ್ಲಿ ಪಟಾಕಿ ಹಚ್ಚಿ ಓಡಿಸಲಾಗುವುದು. ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದರು.