ಬಳ್ಳಾರಿ: ಪತ್ನಿಯನ್ನು ಕೊಲೆಗೈದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜಿಲ್ಲೆಯ ಹೊಸಪೇಟೆ ಟೌನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಹೊಸಪೇಟೆ ನಗರದ ನಿವಾಸಿ ಮಂಜುನಾಥ ಬಂಧಿತ ಆರೋಪಿ. ಈತ 2012ರಲ್ಲಿ ಮೈಸೂರು ಜಿಲ್ಲೆ ತಲಕಾಡಿನ ಇಟ್ಟಿಗೆ ಬಟ್ಟಿಯಲ್ಲಿ ಕೂಲಿ ಕೆಲಸದಲ್ಲಿ ನಿರತರಾಗಿದ್ದ ಪತ್ನಿ ಸುನಿತಾ(25) ತಲೆಗೆ ಬಲವಾಗಿ ಇಟ್ಟಿಗೆಯಿಂದ ಜಜ್ಜಿ ಕೊಲೆಗೈದಿದ್ದ. ಸುನಿತಾ ಜೊತೆ ಮಂಜುನಾಥ 2007ರಲ್ಲಿ ಮದುವೆಯಾಗಿದ್ದ. ಗಂಡ-ಹೆಂಡ್ತಿ ಕೂಲಿ ಅರಸಿ ತಲಕಾಡಿಗೆ ಬಂದಿದ್ದರು. ಪತ್ನಿಯೊಂದಿಗೆ ಗುಳೆ ಹೋಗಿದ್ದ ಮಂಜುನಾಥ್‌ಗೆ ಪತ್ನಿ ಮೇಲೆ ಅದೇನ್ ಸಿಟ್ಟಿತ್ತೋ ಏನೋ.. ಕೊಲೆ ಮಾಡಿದ್ದ. 2015ರಲ್ಲಿ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ಆರೋಪಿ ಮಂಜುನಾಥ ನಿರಪರಾದಧಿ ಎಂದು ತೀರ್ಪು ಬಂದಿತ್ತು.
ನಂತರ ಮೈಸೂರು ಸರ್ಕಾರಿ ಅಭಿಯೋಜಕರು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ರು. ಅಭಿಯೋಜಕರ ಮೇಲ್ಮನವಿ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ಆರೋಪಿಯನ್ನು ವಿಚಾರಣೆಗೆ ಹಾಜರುಪಡಿಸುವಂತೆ ಸೂಚಿಸಿತ್ತಾದರೂ ಅಂದಿನಿಂದ ಈತ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತಿದ್ದ ಮಂಜುನಾಥ. ಮೈಸೂರು, ಹೊಸಪೇಟೆ ಪೊಲೀಸರಿಗೆ ನಾಲ್ಕು ವರ್ಷಗಳಿಂದ ತಲೆನೋವಾಗಿದ್ದ ಈತ ಇಂದು ಕೊನೆಗೆ ಹೊಸಪೇಟೆ ಟೌನ್ ಪೊಲೀಸರ ಅತಿಥಿಯಾಗಿದ್ದಾನೆ.