ಬಳ್ಳಾರಿ: ಗ್ರಾಮ ಪಂಚಾಯತ್ ಚುನಾವಣೆ ಫಲಿತಾಂತ ಹೊರ ಬಿದ್ದ ಕೂಡಲೇ ಅಭ್ಯರ್ಥಿಗಳಿಗೆ ಹೂವಿನ ಮಾಲೆಗಳನ್ನು ಹಾಕಿ, ಹಾಲಿನ ಅಭಿಷೇಕ ಮಾಡಿ, ಪಟಾಕಿ ಹಚ್ಚಿ, ಹಲಗೆ ಹೊಡೆದುಕೊಂಡು ಊರಿನಲ್ಲಿ ಮೆರವಣಿಗೆ ಮಾಡುವ ಮೂಲಕ ಸಂಭ್ರಮ ಆಚರಿಸಿದ ದೃಶ್ಯಗಳು ಕಂಡು ಬಂದವು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆ ಕಾರ್ಯ ರಾತ್ರಿ 12ರ ವರೆಗೆ ನಡೆದಿದ್ದು, ಫಲಿತಾಂಶ ಹೊರಬಿದ್ದ ನಂತರ ಸಂಭ್ರಮಾಚರಣೆಯ ದೃಶ್ಯಗಳು ಕಂಡುಬಂದಿವೆ. ಅಲ್ಲದೇ, ಚುನಾವಣೆಯಲ್ಲಿ ಜಯಶೀಲರಾದವರನ್ನು ಮತ್ತು ಸೋತವರನ್ನು ಕೈ ಕುಲುಕಿಸುವ ಮೂಲಕ ಒಂದುಗೂಡಿಸುವ ಕೆಲಸವನ್ನು ಈ ಗ್ರಾಮದ ಜನರು ಮಾಡಿದ್ದು ಇತರರಿಗೆ ಮಾದರಿಯಾಗಿದೆ.
ಕಂಪ್ಲಿ ತಾಲೂಕಿನ ನಂಬರ್ 3 ಸಣಾಪುರ ಗ್ರಾಮ ಪಂಚಾಯತ್, ಇಟಗಿ ಗ್ರಾಮ ಪಂಚಾಯತ್ ಕ್ಷೇತ್ರದಲ್ಲಿ ಅಯ್ಯೋದಿ ಮೀನ ಪಕ್ಕೀರ, ಸಣ್ಣ ಬಾಲೆ ಸಾಹೇಬ್, ರತ್ನಮ್ಮ, ವಡ್ಡರ ಈರಮ್ಮ, ಕುರುಬರು ಗೂಳಮ್ಮ ಜಯಶೀಲರಾಗಿದ್ದು ಅವರನ್ನು ಸನ್ಮಾನಿಸಲಾಗಿದೆ.
ಬಳ್ಳಾರಿ ಗ್ರಾಮಾಂತರ ಪ್ರದೇಶ ಹಲಕುಂದಿಯಲ್ಲಿ ಜಯಶೀಲರಾದವರಿಗೆ ಹಾಲಿನ ಅಭಿಷೇಕ ಮಾಡಲಾಯಿತು. ಅಭ್ಯರ್ಥಿಗಳಾದ ಕೇಶವ್, ಬುಡೇನ್ ಸಾಬ್, ಹೊನ್ನೂರಮ್ಮ (ಅಂಜಿ) ಅವರಿಗೆ ರಾತ್ರಿ ಫಲಿತಾಂಶ ಬಂದ ಕ್ಷಣದಲ್ಲಿ ಹೂವಿನ ಹಾರಗಳನ್ನು ಹಾಕಿ, ಹಾಲಿನ ಅಭಿಷೇಕ ಮಾಡಲಾಯಿತು.
ಈ ಸುದ್ದಿಯನ್ನೂ ಓದಿ: ಗೆದ್ದ ನಂತರವಷ್ಟೇ ಚಪ್ಪಲಿ ಹಾಕುವುದಾಗಿ ಶಪಥ ಮಾಡಿದ್ದ ಅಭ್ಯರ್ಥಿಗೆ ಗೆಲುವು!
ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯತ್ನ ಎಂ.ಬಿ. ಅಯ್ಯನಹಳ್ಳಿ ಕ್ಷೇತ್ರದ ಚುನಾವಣೆಯಲ್ಲಿ ವಾರ್ಡ್ ನಂಬರ್ 1 ಮತ್ತು 2 ರಲ್ಲಿ ಜಯಶೀಲರಾದ ಕುಟುಂಬಸ್ಥರಿಂದ ಸಂಭ್ರಮಾಚರಣೆ ಮಾಡಲಾಯಿತು. ಅಭ್ಯರ್ಥಿಗಳಾದ ಅಶ್ವತ್ ಕುಮಾರ್, ರೇಣುಕಾಚಾರಿ, ಡಿ. ಭಾಗ್ಯಮ್ಮ, ಕೆ.ಟಿ. ಸಿದ್ದೇಶ್, ಹರಿಜನ ನಾಗರಾಜ್ ಜಯಶೀಲರಾಗಿದ್ದಾರೆ.