ಹೊಸಪೇಟೆ: ಹಂಪಿಯ ರಾಣಿ ಸ್ನಾನಗೃಹ ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಇಲ್ಲಿವರೆಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಇದು 16ನೇ ಶತಮಾನದಲ್ಲಿ ನಿರ್ಮಿಸಿದ್ದು ಎಂಬುದು ಇತಿಹಾಸಕಾರರ ಅಭಿಪ್ರಾಯವಾಗಿದೆ.
ಹಂಪಿಯಿಂದ ಕಮಲಾಪುರಕ್ಕೆ ಹೋಗುವ ಮಾರ್ಗದಲ್ಲಿನ ಅರಮನೆ ಪ್ರದೇಶದ ಬಳಿ ರಾಣಿ ಸ್ನಾನಗೃಹ ಇದೆ. ಇದನ್ನು 16ನೇ ಶತಮಾನದ ವಿಜಯನಗರ ಕಾಲದಲ್ಲಿ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದೆ.
ಸ್ವರೂಪ: ರಾಣಿ ಸ್ನಾನಗೃಹ ಎತ್ತರ ಗೋಡೆಗಳಿಂದ ನಿರ್ಮಿತವಾಗಿದ್ದು, ಚೌಕಾಕಾರದಿಂದ ಕೂಡಿದೆ. ಹಂಪಿಯ ಸುತ್ತಮುತ್ತ ಇಷ್ಟೊಂದು ದೊಡ್ಡ ಆಕಾರದ ಸ್ನಾನಗೃಹ ಎಲ್ಲೂ ಕಾಣಸಿಗುವುದಿಲ್ಲ. 15 ಮೀ. ಚದರ್ ಹಾಗೂ 1.8 ಮೀಟರ್ ಆಳದ ಈಜುಕೊಳ ಇದಾಗಿದೆ. ಅಲ್ಲಲ್ಲಿ ಮುಂದಕ್ಕೆ ಚಾಚಿದ ಮೊಗಸಾಲೆಗಳನ್ನು ಕಾಣಬಹುದು. ಪ್ರತಿಯೊಂದು ಅಂಕಣದ ಛಾವಣಿಯು ಗುಮ್ಮಟಕಾರದಲ್ಲಿದೆ. ನಾನಾ ರೀತಿಯ ಜ್ಯಾಮಿತಿ ಹಾಗೂ ಲತಾಬಳ್ಳಿಗಳ ರಚನೆಗಳಿಂದ ಅಲಂಕೃತವಾಗಿದೆ. ಈಜುಕೊಳಕ್ಕೆ ಕಮಲಾಪುರದ ಕೆರೆಯಿಂದ ನೀರನ್ನು ಸರಬರಾಜು ಮಾಡಲಾಗುತ್ತಿತ್ತು. ಅಲ್ಲದೇ ಮಲಿನವಾದ ನೀರು ಹೋಗಲು ಒಂದು ಕಡೆ ವ್ಯವಸ್ಥೆ ಮಾಡಿರುವುದನ್ನು ಕಾಣಬಹುದಾಗಿದೆ.
ರಾಣಿ ಸ್ನಾನಗೃಹ ಜೀರ್ಣೋದ್ಧಾರ: ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯು ರಾಣಿ ಸ್ನಾನಗೃಹಕ್ಕೆ ಜೀರ್ಣೋದ್ಧಾರ ಮಾಡಿದೆ. ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಸರಿಪಡಿಸುವಂತ ಕಾರ್ಯವನ್ನು ಪುರಾತತ್ವ ಇಲಾಖೆ ಮಾಡಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಸಿ.ಮಹಾದೇವ ಅವರು ಮಾತನಾಡಿ, ರಾಣಿ ಸ್ನಾನಗೃಹವನ್ನು ಇಂಡೋ-ಇಸ್ಲಾಮಿಕ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಇದರ ಆಕಾರವನ್ನು ನೋಡಿದಾಗ ರಾಜರ ಕುಟುಂಬಕ್ಕೆ ಬಳಕೆಗೆ ಸಿಮೀತವಾಗಿತ್ತು ಎಂಬುದು ತಿಳಿಯುತ್ತದೆ. ಕಮಲಾಪುರ ಕೆರೆಯಿಂದ ನೀರಿನ ಸಂಪರ್ಕ ನೀಡಿರಬಹುದು. ಈ ಭಾಗದಲ್ಲಿ ಅರಮನೆ ಪುಷ್ಕರಣಿ ಹಾಗೂ ಕಾಲುವೆಗಳು ಕಂಡು ಬರುತ್ತದೆ. ಮಧ್ಯೆಕಾಲದ ನಗರೀಕರಣದ ವ್ಯವಸ್ಥೆಯನ್ನು ಈ ಕಟ್ಟಡ ಮಾಹಿತಿಯನ್ನು ನೀಡುತ್ತದೆ ಎಂದು ಹೇಳಿದರು.