ಹೊಸಪೇಟೆ: ಜಿಲ್ಲಾ ಪ್ರಭಾರ ಹಿರಿಯ ನ್ಯಾಯಾಧೀಶರ ಆದೇಶದಂತೆ ನಗರದ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಗಾಡ್ರೇಜ್ ಮತ್ತು ಚೇರ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಹೊಸಪೇಟೆ ತಾಲೂಕಿನ ಜವಕ ಹಾಗೂ ಹಂಪದೇವನಹಳ್ಳಿ ರೈತರಿಂದ ಜಮೀನು ತಗೆದುಕೊಂಡಿದ್ದರು. ಆ ಜಮೀನಿನಲ್ಲಿ ನೀರು ಸಂಗ್ರಹಣೆ ಮಾಡಲಾಗಿತ್ತು. ಇಲಾಖೆಯು ರೈತರಿಗೆ ನೀಡಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಹಾಗಾಗಿ 22 ರೈತರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ವಿರುದ್ಧ ದೂರು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇಲಾಖೆ ಚರಾಸ್ತಿ ಜಪ್ತಿಗೆ ಆದೇಶ ನೀಡಿದೆ. ಈಟಿವಿ ಭಾರತದೊಂದಿಗೆ ರೈತರ ಪರ ವಕೀಲ ಗುರುಬಸಪ್ಪ ಮಾತನಾಡಿ, ಜಿಲ್ಲಾ ಪ್ರಭಾರ ಹಿರಿಯ ನ್ಯಾಯಾಧೀಶರ ಆದೇಶದಂತೆ ಇಲಾಖೆಯ ಚರಾಸ್ತಿಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಇಲಾಖೆ ಹಲವು ವರ್ಷಗಳಿಂದ ರೈತರಿಗೆ ನೀಡಬೇಕಾದ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಹಾಗಾಗಿ ಇಲಾಖೆ ವಿರುದ್ಧ ಒಟ್ಟು 22 ದೂರುಗಳನ್ನು ರೈತರು ಸಲ್ಲಿಸಿದ್ದರು ಎಂದು ಹೇಳಿದರು.