ಬಳ್ಳಾರಿ/ಯಾದಗಿರಿ/ದಾವಣಗೆರೆ: ಹೈದಾರಾಬಾದ್ ಕರ್ನಾಟಕ ಭಾಗ ಸೇರಿದಂತೆ ರಾಜ್ಯದ ವಿವಿಧೆಡೆ ನಿನ್ನೆ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ಬಿರು ಬಿಸಿಲಿಗೆ ಕಂಗಾಲಾಗಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.

ಯಾದಗಿರಿ, ಬೀದರ್, ದಾವಣಗೆರೆಯಲ್ಲಿ ಗಾಳಿ ಸಮೇತ ಧಾರಾಕಾರ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿನ್ನೆ ಗುಡುಗು ಸಹಿತ ಸಹಿತ ಆಲಿಕಲ್ಲು ಮಳೆಯಾಗಿದೆ. ತಾಲೂಕಿನ ಎಸ್. ಓಬಳಾಪುರ ಗ್ರಾಮದಲ್ಲಿ ಗ್ರಾಮಸ್ಥರು ಆಲಿಕಲ್ಲು ಹರಳನ್ನು ಕೈಯಲ್ಲಿ ಹಿಡಿದುಕೊಂಡು ತೂರಾಡುತ್ತಾ ಸಂಭ್ರಮಿಸಿದರು. ಅಲ್ಲದೇ, ಗೌರಿಪುರ, ತಿಪ್ಪನಮರಡಿ, ಸೋವೇನಹಳ್ಳಿ, ಬೊಮ್ಮಘಟ್ಟ, ಚೋರುನೂರು, ಸಂಡೂರು, ತಾರಾನಗರ ಸೇರಿ ಇತರೆ ಗ್ರಾಮಗಳಲ್ಲಿಯೂ ಆಲಿಕಲ್ಲು ಸಹಿತ ಮಳೆ ಸುರಿದಿದೆ.
ಮಳೆ ಗಾಳಿಯಿಂದಾಗಿ ಓಬಳಾಪುರ ಹಾಗೂ ದೇವರ ಬುಡ್ಡೇನಹಳ್ಳಿಯಲ್ಲಿ ಅನೇಕ ಮನೆಗಳ ಸಿಮೆಂಟ್ ಮತ್ತು ತಗಡಿನ ಸೀಟುಗಳು ಹಾರಿಹೋಗಿವೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಈ ಆಲಿಕಲ್ಲು ಮಳೆಯಿಂದ ಗ್ರಾಮದ ಕೆರೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡಿದೆ.

ಸಿಡಿಲಿಗೆ 6 ಮೇಕೆ, ಮೂರು ಕುರಿ ಬಲಿ:
ತಿಪ್ಪನಮರಡಿ ಗ್ರಾಮದ ಹೊಲದಲ್ಲಿ ಸಿಡಿಲು ಬಡಿದು ಒಡೇರಹಳ್ಳಿಯ ಸಣ್ಣ ಬೊಮ್ಮಯ್ಯ ಎಂಬುವರ 6 ಮೇಕೆ ಹಾಗೂ 3 ಕುರಿಗಳು ಮೃತಪಟ್ಟಿವೆ. ಇನ್ನು ಭುಜಂಗ ನಗರದ ಗಟಾರದಲ್ಲಿ ಕಸ ಕಡ್ಡಿ ತುಂಬಿದ್ದ ಪರಿಣಾಮ ಮಳೆ ನೀರು ಕಾಂಪೌಂಡ್ ಒಳಗೆ ನುಗ್ಗಿ, ಅಲ್ಲಿ ಸಂಗ್ರಹಿಸಿದ್ದ ಮೆಕ್ಕೆಜೋಳ ಹಾಗೂ ಹುಲ್ಲಿನ ಬಣವೆಗಳ ಅಡಿ ಸೇರಿಕೊಂಡಿದೆ. ಹೀಗಾಗಿ ಮೇವು ಹಾಳಾಗಿದೆ ಎಂದು ಗ್ರಾಮದ ರೈತ ಎಂ. ಷಣ್ಮುಖಗೌಡ ತಿಳಿಸಿದರು.
ಇನ್ನು ದಾವಣಗೆರೆಯ ಇಲ್ಲಿನ ಹರಪನಹಳ್ಳಿ ತಾಲೂಕಿನಲ್ಲಿಯೂ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಹರಪನಹಳ್ಳಿ ತಾಲೂಕಿನ ಅಲಮಾಸಗೇರೆ ಗ್ರಾಮ ಸೇರಿದಂತೆ ಸುತ್ತಮುತ್ತ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಮನೆಯ ಚಾವಣಿಗಳು ಹಾನಿಗೀಡಾಗಿವೆ.