ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ಪಟ್ಟಣದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ವಾರದ ಸಂತೆ ಮೈದಾನವು ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ತರಕಾರಿ, ಧವಸ- ಧಾನ್ಯಗಳು ನೀರಲ್ಲಿ ಕೊಚ್ಚಿಹೋಗಿವೆ.
ಅರ್ಧಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಮಳೆ ಬಿದ್ದ ಪರಿಣಾಮ ತಗ್ಗು ಪ್ರದೇಶದಲ್ಲಿದ್ದ ವಾರದ ಸಂತೆ ಮೈದಾನಕ್ಕೆ ಎತ್ತರದ ಪ್ರದೇಶದಿಂದ ಮಳೆಯ ನೀರಿನ ಕೋಡಿ ಹರಿದು ಬಂದಿದೆ. ಇತ್ತೀಚೆಗೆ ಸಂತೆ ನಡೆಯುವ ಪ್ರದೇಶದ ಸುತ್ತಲೂ ಕಾಂಪೌಂಡ್ ನಿರ್ಮಿಸಿದ್ದರೂ ಮಳೆಯ ನೀರು ಹರಿದು ಹೋಗುವುದಕ್ಕೆ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಹೀಗಾಗಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ಕೆಲವೇ ಕ್ಷಣಗಳಲ್ಲಿ ಸಂತೆ ಮೈದಾನ ಕೆರೆಯ ಸ್ವರೂಪ ತಾಳಿದೆ.
ಮಳೆ ನೀರಿನಿಂದ ತರಕಾರಿಗಳು, ಧವಸ-ಧಾನ್ಯ, ಸೊಪ್ಪು, ಮಸಾಲೆ ಪದಾರ್ಥಗಳು ಹಾಳಾಗಿವೆ. ಇನ್ನೊಂದೆಡೆ ಸಂತೆ ವಹಿವಾಟಿಗೆ ಅಡಚಣೆ ಉಂಟಾಗಿ ವ್ಯಾಪಾರಿಗಳು ನಷ್ಟ ಅನುಭವಿಸಿದ್ರು.
ತಗ್ಗು ಪ್ರದೇಶಕ್ಕೆ ಭಾರೀ ಪ್ರಮಾಣದ ಮಳೆ ನೀರು ನುಗ್ಗಿ ಬರುತ್ತಿದ್ದರೂ ಅದನ್ನು ತಡೆಯಲು ಕ್ರಮ ಕೈಗೊಂಡಿಲ್ಲ ಎಂದು ವ್ಯಾಪಾರಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.