ವಿಜಯನಗರ ಜಿಲ್ಲೆ: ಕೊಟ್ಟೂರು ಪಟ್ಟಣದ ಮುದುಕನಕಟ್ಟೆ ಪ್ರದೇಶದಲ್ಲಿ ನಿನ್ನೆ ಸಂಜೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿ ಉರಿದ ಘಟನೆ ನಡೆದಿದೆ.
ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿದ ದೃಶ್ಯ ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿದೆ. ಹೊಸಪೇಟೆ, ಹೂವಿನ ಹಡಗಲಿ, ಹಗರಿಬೊಮ್ಮನಹಳ್ಳಿ ಭಾಗದಲ್ಲಿ ವರ್ಷದ ಮೊದಲ ಮಳೆಯ ಸಿಂಚನವಾಗಿದ್ದು, ಮೋಡ ಕವಿದ ವಾತಾವರಣವಿದೆ.
ಸಿಡಿಲಿಗೆ ಕುರಿಗಾಹಿ ಬಲಿ:
ಕೂಡ್ಲಿಗಿ ತಾಲೂಕಿನ ಕುದುರೇಡೆವು ಗ್ರಾಮದಲ್ಲಿ ನಿನ್ನೆ ಸಂಜೆ ಕುರಿಗಾಹಿ ಯುವಕನಿಗೆ ಸಿಡಿಲು ಬಡಿದಿದ್ದು, ಆ ಯುವಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ.
ಯುವಕ ನಿಂಗರಾಜು (26) ಎಂದು ಗುರುತಿಸಲಾಗಿದೆ. ಕಾಡಿಗೆ ಕುರಿಗಳನ್ನು ಮೇಸಲು ಹೋಗಿದ್ದನು. ಸಂಜೆ ಮೋಡಕವಿದ ವಾತಾವಾರಣವಿದ್ದ ಕಾರಣ ನಿಂಗರಾಜು ಕುರಿಗಳೊಂದಿಗೆ ಬೇಗನೆ ಮನೆಗೆ ಹೋಗಲು ಇಚ್ಛಿಸಿದ್ದಾನೆ. ಆದ್ರೆ ಈ ವೇಳೆ ಕುರಿಯೊಂದು ತಪ್ಪಿಸಿಕೊಂಡಿದ್ದು, ಹುಡಕಿಕೊಂಡು ಗ್ರಾಮದ ಹತ್ತಿರ ಬರುವಾಗ ಸಿಡಲು ಬಡಿದು ಮೃತಪಟ್ಟಿದ್ದಾನೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರಪನಹಳ್ಳಿ ಯುವಕ ಸಾವು:
ಹಾಗೆಯೇ ಹರಪನಹಳ್ಳಿ ತಾಲೂಕಿನ ಮೈದೂರು ಗ್ರಾಮದಲ್ಲಿಯೂ ಕುರಿಗಾಹಿ ಯುವಕ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ. ಬಸವರಾಜ (22) ಮೃತಪಟ್ಟ ಕುರಿಗಾಹಿ. ಸಂಜೆ 7.30ಸುಮಾರಿಗೆ ಗುಡುಗಿನೊಂದಿಗೆ ಮಳೆ ಪ್ರಾರಂಭಗೊಂಡಿದ್ದು, ಗ್ರಾಮದ ಹೊರವಲಯದಲ್ಲಿನ ಜಮೀನಿನಲ್ಲಿ ಕುರಿಗಳನ್ನು ಮೇಯಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.