ಹೊಸಪೇಟೆ: ಈ ಹಿಂದೆ ಭೀಕರ ಬರಗಾಲ ಎದುರಾದ ಪರಿಣಾಮ ಜನ - ಜಾನುವಾರುಗಳಿಗೆ ಕುಡಿಯಲು ನೀರು ಹಾಗೂ ಮೇವಿನ ಕೊರತೆಯಿದ್ದು ಇದೀಗ ಹೊಸಪೇಟೆ ತಾಲೂಕಿನಾದ್ಯಂತ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಜನ - ಜಾನುವಾರುಗಳ ಮೊಗದಲ್ಲಿ ಸಂತಸ ಮೂಡಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಸುರಿದ ಮಳೆಗೆ ಹಚ್ಚಹಸಿರಿನ ಹುಲ್ಲುಗಾವಲು ಮೈದಳಿಯುವಂತೆ ಮಾಡಿದೆ. ಇದರಿಂದ ದನ ಗಾಹಿಗಳೂ ಸೇರಿದಂತೆ ರೈತಾಪಿ ವರ್ಗ ಖುಷಿಯಲ್ಲಿದೆ. ಹಳ್ಳ, ಕೊಳ್ಳ ತುಂಗಭದ್ರಾ ಜಲಾಶಯ ತುಂಬಿದ್ದು, ಜನ- ಜಾನುವಾರುಗಳಿಗೆ ಹುಲ್ಲು ಮತ್ತು ಕುಡಿಯಲು ನೀರು ಲಭ್ಯವಾಗಿದ್ದು, ಹಸಿವು ನೀಗಿಸಿದೆ. ರೈತರ ಜಮೀನನಲ್ಲಿರುವ ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಸದ್ಯ ಎಲ್ಲ ರೈತರು ತಮ್ಮ ಜಮೀನಿನ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ.