ಬಳ್ಳಾರಿ: ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದ ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ 6 ಮನೆಗಳ ಶೀಟ್ಗಳು ಹಾರಿ ಹೋಗಿವೆ. ಮಳೆನೀರು ಗ್ರಾಮದ ಮಸೀದಿ ಸೇರಿದಂತೆ ಪಕ್ಕದ ಓಣಿಗಳಿಗೆಲ್ಲಾ ನುಗ್ಗಿದೆ. ರಾಷ್ಟ್ರೀಯ ಹೆದ್ದಾರಿಯ ನೀರು ಸಹ ಊರೊಳಗೆ ಹರಿದು ಬಂದಿದೆ. ಕೆಲದಿನಗಳ ಹಿಂದಷ್ಟೆ ನಿರ್ಮಾಣವಾಗಿದ್ದ ರಾಷ್ಟ್ರೀಯ ಹೆದ್ದಾರಿ 50 ಕಳಪೆ ಕಾಮಗಾರಿಯಂತೆ ಕಂಡುಬಂದಿದ್ದು, ರಸ್ತೆಯ ಪಕ್ಕದ ಮಣ್ಣು ಕುಸಿದು ರಸ್ತೆ ಕೂಡ ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈ ರೀತಿಯಾಗಿ ಮಣ್ಣು ಮಿಶ್ರಿತ ನೀರು ಮನೆಯ ಒಳಗೆ ನುಗ್ಗಿ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ ಮತ್ತು ರಾತ್ರಿ ಊಟ ಮಾಡಲು ಸಹ ಸಮಸ್ಯೆಯಾಗಿದೆ ಎಂದು "ಸ್ಥಳೀಯ ಹೆದ್ದಾರಿ ಸಹಾಯಕರು NH 50" ವ್ಯಾಟ್ಸ್ ಆ್ಯಪ್ ಗ್ರೂಪ್ ನಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ, ಮಳೆಯ ನೀರು ಮನೆಗಳಿಗೆ ನುಗ್ಗದಂತೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕಾಗಿದೆ. ಜೊತೆಗೆ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ನೀಡಬೇಕೆಂದು ನಿವಾಸಿಗಳು ಮನವಿ ಮಾಡಿದ್ದಾರೆ.