ಹೊಸಪೇಟೆ (ವಿಜಯನಗರ): ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆ ವಿಜಯನಗರ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬ್ಯಾಲಹುಣ್ಸಿ, ಮಕರಬ್ಬಿ, ಕೋಟಿಹಾಳ ಹಾಗು ಬನ್ನಿಮಟ್ಟಿಯಲ್ಲಿ ಪ್ರವಾಹದ ಆತಂಕ ಉಂಟಾಗಿದೆ.
ತುಂಗಭದ್ರಾ ನದಿ ತೀರದಲ್ಲಿ ಮೆಕ್ಕೆಜೋಳ, ಭತ್ತ ಸೇರಿದಂತೆ ಹಲವು ಬೆಳೆಗಳು ಜಲಾವೃತವಾಗಿವೆ. ಬ್ಯಾಲಹುಣ್ಸಿ ಹಾಗೂ ಮಕರಬ್ಬಿ ಗ್ರಾಮಗಳ ಸಂಪರ್ಕದ ಸೇತುವೆ ನೀರಿನಿಂದ ಮುಳುಗಡೆಯಾಗಿದೆ. ಹೀಗಾಗಿ ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ದೇವಸ್ಥಾನಕ್ಕೆ ನುಗ್ಗಿದ ನೀರು: ಹೂವಿನಹಡಗಲಿಯ ಐತಿಹಾಸಿಕ ಮದಲಗಟ್ಟೆ ಆಂಜನೇಯ ದೇವಸ್ಥಾನಕ್ಕೆ ನೀರು ನುಗ್ಗಿದೆ.
ತುಂಗಭದ್ರಾ ಡ್ಯಾಂನಿಂದ 36,217 ಕ್ಯೂಸೆಕ್ ನೀರು ಬಿಡುಗಡೆ:
ತುಂಗಭದ್ರಾ ಜಲಾಶಯದ 12 ಕ್ರಸ್ಟ್ ಗೇಟ್ಗಳ ಮೂಲಕ ಸದ್ಯ 36,217 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. 2 ಅಡಿ ಎತ್ತರದಲ್ಲಿ 12 ಕ್ರಸ್ಟ್ ಗೇಟ್ ಮೂಲಕ 36,217 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಕಾಲುವೆಗೆ 8,770 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಒಟ್ಟು 45 ಸಾವಿರ ಕ್ಯೂಸೆಕ್ ನೀರನ್ನು ತುಂಗಭದ್ರಾ ಜಲಾಶಯದಿಂದ ಬಿಡುಗಡೆ ಮಾಡಲಾಗುತ್ತಿದೆ.
ಒಳಹರಿವಿನ ಪ್ರಮಾಣ ಆಧರಿಸಿ ಮತ್ತಷ್ಟು ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಆಡಳಿತ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಜಲಾಶಯದಲ್ಲಿ 1629.35 ಅಡಿ ಇದ್ದು, 87.430 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,91,957 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಇದನ್ನೂ ಓದಿ: ಅಥಣಿಯಲ್ಲಿ ಪ್ರವಾಹ ಭೀತಿ: ಮುಳುಗಡೆ ಹಂತ ತಲುಪಿದ ಹಲ್ಯಾಳ ಸೇತುವೆ