ಬಳ್ಳಾರಿ: ಜಿಲ್ಲೆಯ ವಿಶ್ವಪ್ರಸಿದ್ಧ ಹಂಪಿ ವೀಕ್ಷಣೆಗೆ ಇಂದಿನಿಂದ ಪ್ರವಾಸಿಗರಿಗೆ ಮುಕ್ತ ಅವಕಾಶ ಇದೆ. ಕಳೆದ ಮೂರು ತಿಂಗಳಿಂದಲೂ ಪ್ರವಾಸಿಗರಿಲ್ಲದೆ ಬಣಗುಡುತ್ತಿದ್ದ ಹಂಪಿಗೆ ಕಳೆ ಬಂದಂತಾಗಿದೆ.
ಹೌದು, ಮಹಾಮಾರಿ ಕೊರೊನಾದಿಂದಾಗಿ ಪ್ರವಾಸಿಗರಿಗೆ ಕಳೆದ ಮೂರು ತಿಂಗಳಿಂದ ಹಂಪಿ ಸ್ಮಾರಕ ವೀಕ್ಷಿಸಲು ನಿಷೇಧ ಹೇರಲಾಗಿತ್ತು. ಆದರೆ ಇಂದಿನಿಂದ ಪ್ರವಾಸಿಗರಿಗೆ ಹಂಪಿ ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಪಾರಂಪರಿಕ ತಾಣವಾದ ಹಂಪಿ ವೀಕ್ಷಿಸಲು ಅವಕಾಶವಿರಲಿಲ್ಲ. ಇದೀಗ ಹಂಪಿಯ ಸ್ಮಾರಕ ವೀಕ್ಷಿಸಲು ಜಿಲ್ಲಾಡಳಿತ ಕ್ಲಿಯರನ್ಸ್ ನೀಡಿದ ಹಿನ್ನೆಲೆ ಭಾರತೀಯ ಪುರಾತತ್ವ ಇಲಾಖೆ ಅನುಮತಿ ನೀಡಿದ್ದು, ಹಂಪಿ ಲಾಕ್ ಡೌನ್ ನಿಂದ ಮುಕ್ತಿ ಪಡೆದಂತಾಗಿದೆ.
ಕೊರೊನಾ ಹಿನ್ನೆಲೆ ಮಾರ್ಚ್ 23 ರಂದು ಲಾಕ್ ಡೌನ್ ಘೋಷಿಸಿದ ಬಳಿಕ ಸತತ ಮೂರು ತಿಂಗಳ ಕಾಲ ಹಂಪಿ ನೋಡಲು ಯಾರಿಗೂ ಅವಕಾಶವಿರಲಿಲ್ಲ. ಇಲ್ಲಿಗೆ ಹೆಚ್ಚಿನ ಮಟ್ಟದಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಹಂಪಿಯೊಳಗೆ ಯಾರನ್ನೂ ಬಿಡದಂತೆ ಸೂಚನೆ ನೀಡಿತ್ತು. ಅದರನ್ವಯ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆ ಪ್ರವಾಸಿಗರಿಗೆ ಇದುವರೆಗೂ ನಿರ್ಬಂಧ ವಿಧಿಸಿತ್ತು. ಸದ್ಯ ಆ ನಿರ್ಬಂಧವನ್ನ ಸಡಿಲಗೊಳಿಸಿ ಹಂಪಿಯ ಸ್ಮಾರಕಗಳನ್ನ ನೋಡಲು ಅವಕಾಶ ಕಲ್ಪಿಸಿದೆ.
ಇದಲ್ಲದೆ ಪುರಾತತ್ವ ಇಲಾಖೆಯು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಹಂಪಿಯೊಳಗೆ ಯಾರೇ ಕಾಲಿಟ್ಟರೂ ನೋಂದಣಿ ಮಾಡಿಕೊಳ್ಳಲಿದೆ. ಬರುವವರು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ಗುಂಪು, ಗುಂಪಾಗಿ ಬರದೇ ಸಾಮಾಜಿಕ ಅಂತರ ಕಾಪಾಡಬೇಕಿದೆ.
ಮಾರ್ಗದರ್ಶಿಗಳಿಗೆ ಸಂತಸ: ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದರಿಂದ ಹಂಪಿಯಲ್ಲಿದ್ದ 200 ಕ್ಕೂ ಹೆಚ್ಚು ಮಾರ್ಗದರ್ಶಿಗಳಿಗೆ ಜೀವನ ನಡೆಸಲು ತೀವ್ರ ತೊಂದರೆಯಾಗಿತ್ತು. ಹಲವರು ವಿಧಿಯಿಲ್ಲದೆ ನರೇಗಾ ಸೇರಿ ಇನ್ನಿತರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸದ್ಯ ಪ್ರವಾಸಿಗರಿಗೆ ಸ್ಮಾರಕ ನೋಡಲು ಅವಕಾಶ ಕಲ್ಪಿಸಿರುವುದರಿಂದ ಮಾರ್ಗದರ್ಶಿಗಳ ಮೊಗದಲ್ಲಿ ಸಂತಸ ಮೂಡಿದೆ.
ಅಂದಾಜು 50 ಕೋಟಿ ರೂ.ಗಳ ನಷ್ಟ: 2019ರ ಮಾರ್ಚ್, ಏಪ್ರಿಲ್, ಮೇ ತಿಂಗಳ ವೇಳೆ ಹಂಪಿಗೆ 77.15 ಲಕ್ಷ ರೂ.ಆದಾಯ ಹರಿದು ಬಂದಿತ್ತು. ಅಲ್ಲದೆ, 2019 ರ ಮಾರ್ಚ್ ನಲ್ಲಿ ಹಂಪಿ ಸ್ಮಾರಕಗಳಿಗೆ ದೇಶಿ 11,578 ಮತ್ತು 1475 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಏಪ್ರಿಲ್ ನಲ್ಲಿ 11,129 ಮತ್ತು 459 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಮೇ ತಿಂಗಳಲ್ಲಿ ದೇಶಿ 18,035 ಮತ್ತು 312 ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದರು. ಆದರೆ, 2020ರ ಮಾರ್ಚ್ 23 ರಿಂದ ಲಾಕ್ಡೌನ್ ಹಿನ್ನೆಲೆ ಪ್ರವಾಸಿಗರ ವೀಕ್ಷಣೆಗೆ ಅವಕಾಶ ನೀಡದ್ದರಿಂದ 50 ಕೋಟಿಗೂ ಹೆಚ್ಚಿನ ಆದಾಯವು ನಷ್ಟವಾಗಿದೆ. ಇದೀಗ ಪ್ರವಾಸಿಗರ ವೀಕ್ಷಣೆಗೆ ಅನುಕೂಲ ಕಲ್ಪಿಸಿದ್ದು, ಇನ್ನಾದರೂ ಆದಾಯ ಹರಿದು ಬರುವುದೇ ಎಂಬುದನ್ನು ಕಾದು ನೋಡಬೇಕಿದೆ.
ಭಾರತೀಯ ಪುರಾತತ್ವ ಇಲಾಖೆಯ ಸೂಚನೆ ಮೇರೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಹಂಪಿ ಸ್ಮಾರಕ ವೀಕ್ಷಿಸಲು ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ವೀಕ್ಷಣೆಗೆ ಬರುವ ಪ್ರವಾಸಿಗರು ಸಾಮಾಜಿಕ ಅಂತರ ಕಾಪಾಡಬೇಕು. ಗುಂಪು, ಗುಂಪಾಗಿ ಬರಬಾರದು ಎಂದು ಹಂಪಿ ಭಾರತೀಯ ಸರ್ವೇಕ್ಷಣಾ ಪುರಾತತ್ವ ಇಲಾಖೆಯ ಉಪಾಧೀಕ್ಷಕ ಕಾಳಿಮುತ್ತು ತಿಳಿಸಿದ್ದಾರೆ.