ಹೊಸಪೇಟೆ : ಹಂಪಿ ಸ್ಮಾರಕಗಳನ್ನು ಪ್ರತಿನಿತ್ಯ ಆಗಸದಿಂದ ನೋಡುವ ಕಾಲ ಸನ್ನಿಹಿತವಾಗಿದೆ. ಪ್ರವಾಸಿಗರ ಆಸೆಯನ್ನು ಎಕ್ಸ್ಪ್ರೆಸ್ ಹಾಲಿಡೇಸ್ ಎನ್ನುವ ತಮಿಳುನಾಡಿನ ಸಂಸ್ಥೆಯೊಂದು ಈಡೇರಿಸಲು ಮುಂದಾಗಿದೆ.
ಈ ಸಂಸ್ಥೆಯು ತಮಿಳುನಾಡಿನ ಕೊಯಮತ್ತೂರಿಂದ ಹಂಪಿಗೆ ಹೆಲಿಕ್ಯಾಪ್ಟರ್ ಸೌಲಭ್ಯ ಒದಗಿಸಲು ಮುಂದಾಗಿದೆ. ಇದು ಇನ್ನು ಕೆಲವೇ ದಿನಗಳಲ್ಲಿ ಈ ಸೇವೆ ಪ್ರಾರಂಭವಾಗಿಲಿದೆ. ಕೊರೊನಾ ಲಾಕ್‌ಡೌನ್ ಬಳಿಕ ಹಂಪಿ ಪ್ರವಾಸೋದ್ಯಮ ಬೆಳವಣಿಗೆಗೆ ಮುನ್ನಡಿಯಾಗಲಿದೆ.
ಪ್ರವಾಸೋದ್ಯಮಕ್ಕೆ ಉತ್ತೇಜನ : ಸಂಸ್ಥೆಯು ಮುಂಬರುವ ನವೆಂಬರ್ ತಿಂಗಳಿಂದ ಹಂಪಿಗೆ ಹೆಲಿಕಾಪ್ಟರ್ ಪೂರೈಸಲಿದೆ. ಇದರಿಂದಾಗಿ ತಮಿಳುನಾಡಿನ ಕೊಯಮತ್ತೂರಿನಿಂದ ಪ್ರವಾಸಿಗರು ಸೀದಾ ಹಂಪಿಗೆ ಆಗಮಿಸಬಹುದು. ಕೊರೊನಾ ಬಂದ ಬಳಿಕ ಹಂಪಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಬಹಳಷ್ಟು ಕಡಿಮೆಯಾಗಿತ್ತು. ಈಗ ಹೆಲಿಕಾಪ್ಟರ್ ಪ್ರಾರಂಭ ಮಾಡುವುದರಿಂದ ಪ್ರವಾಸಿಗರಲ್ಲಿ ಭಯದ ವಾತಾವರಣ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದೆ. ಹೀಗಾಗಿ, ದೂರದಿಂದ ಬರುವ ಪ್ರವಾಸಿಗರನ್ನು ಸೆಳೆಯಲು ಹೆಲಿಕಾಪ್ಟರ್ ಅನುಕೂಲವಾಗಲಿದೆ.
ಹಂತ ಹಂತವಾಗಿ ಹೆಲಿಕಾಪ್ಟರ್ ಓಡಾಟ : ಪ್ರಾರಂಭದಲ್ಲಿ ಎರಡು ಹೆಲಿಕಾಪ್ಟರ್ ತಮಿಳುನಾಡಿನ ಕೊಯಮತ್ತೂರಿನಿಂದ ಓಡಾಡಲಿವೆ. ಬಳಿಕ ಪ್ರವಾಸಿಗರ ಸಂಖ್ಯೆಗೆ ಅನುಗುಣವಾಗಿ ಹೆಲಿಕಾಪ್ಟರ್ ಸೌಲಭ್ಯ ಒದಗಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಆಧುನಿಕತೆ ಸ್ಪರ್ಶ : ಹಂಪಿಗೆ ಆಗಮಿಸಲು ಬಸ್ ಹಾಗೂ ರೈಲು ಸೌಲಭ್ಯ ಮಾತ್ರವಿತ್ತು. ಈಗ ಹೆಲಿಕಾಪ್ಟರ್ ಕೊಯಮತ್ತೂರಿನಿಂದ ಹೊರಟು ಹಂಪಿ ಬಳಿಯ ಕಮಲಾಪೂರ ಲಘು ವಿಮಾನ ನಿಲ್ದಾಣದಲ್ಲಿ ಪ್ರವಾಸಿಗರನ್ನು ಇಳಿಸಲಿದೆ. ದಕ್ಷಿಣ ಭಾರತದ ತಮಿಳುನಾಡು, ಕೇರಳ, ತೆಲಂಗಾಣ ಸೇರಿ ನಾನಾ ರಾಜ್ಯದ ಪ್ರವಾಸಿಗರು ಹೆಲಿಕಾಪ್ಟರ್ ಸೇವೆಯ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಭಾರತೀಯ ಪುರಾತತ್ವ ಇಲಾಖೆಯೂ ಈ ಸೇವೆಗೆ ಸಮ್ಮತಿ ನೀಡಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ವಿಶ್ವ ವಿಖ್ಯಾತ ಹಂಪಿ ತಾಣ : ಹಂಪಿ ನೋಡಲು ದೇಶ ಹಾಗೂ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಯಾಕೆಂದರೆ, ಪಾರಂಪರಿಕ ಪಟ್ಟಿಯಲ್ಲಿ ಹಂಪಿ ಸ್ಥಾನ ಪಡೆದುಕೊಂಡಿದೆ. ಕೊರೊನಾದಿಂದ ಕಳೆದ ಐದು ತಿಂಗಳಿಂದ ಹಂಪಿ ಪ್ರವಾಸೋದ್ಯಮಕ್ಕೆ ಮಂಕು ಕವಿದಿತ್ತು. ಈಗ ತಮಿಳುನಾಡಿನಿಂದ ಹೆಲಿಕ್ಯಾಪ್ಟರ್ ಪ್ರಾರಂಭವಾಗಿರುವುದು ಹೊಸ ಚೈತನ್ಯ ನೀಡಿದಂತಾಗಿದೆ.
ಎಕ್ಸ್ಪ್ರೆಸ್ ಹಾಲಿಡೇಸ್ ಎಂ ಡಿ ಹರಿಹರನ್ ಅವರು ಮಾತನಾಡಿ, ಹಂಪಿಯಲ್ಲಿ ಸ್ಮಾರಕ ವೀಕ್ಷಣೆಗೆ ಹೆಲಿಕ್ಯಾಪ್ಟರ್ ಸೌಲಭ್ಯ ಒದಗಿಸಲಾಗಿದೆ. ಇದೇ ಮೊದಲ ಬಾರಿಗೆ ಸಂಸ್ಥೆಯಿಂದ ತಮಿಳನಾಡಿನ ಕೊಯಮತ್ತೂರಿಂದ ಹೆಲಿಕಾಪ್ಟರ್ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.
ವಿಶ್ವ ಪರಂಪರೆ ನಿರ್ವಹಣಾ ಹಂಪಿ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ ಎನ್ ಲೋಕೇಶ್ ಅವರು ಮಾತನಾಡಿ, ಹೆಲಿಕಾಪ್ಟರ್ ಸೌಲಭ್ಯ ಒದಗಿಸುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗಲಿದೆ. ಕೊರೊನಾ ಲಾಕ್‌ಡೌನ್‌ನಿಂದ ಹಂಪಿ ಪ್ರವಾಸೋದ್ಯಮಕ್ಕೆ ಮಂಕು ಕವಿದಿತ್ತು. ಈಗ ಚೇತರಿಕೆ ಕಾಣುವ ಲಕ್ಷಣಗಳು ಕಾಣುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದರು.