ಬಳ್ಳಾರಿ: ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿರುವುದರಿಂದ ಅಂದಾಜು 28 ಕ್ರಸ್ಟ್ ಗೇಟ್‍ಗಳ ಮೂಲಕ 77 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗಿದ್ದು, ಐತಿಹಾಸಿಕ ಹಂಪಿಯ ಕೆಲ ಸ್ಮಾರಕಗಳು ಜಲಾವೃತಗೊಂಡಿವೆ.
ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ನದಿಗಳಿಗೆ ಹರಿಬಿಟ್ಟ ಪರಿಣಾಮ ಪುರಂದರದಾಸರ ಮಂಟಪ, ವಿರೂಪಾಕ್ಷೇಶ್ವರ ದೇಗುಲ ಹಿಂಭಾಗದ ಕರ್ಮಮಂಟಪ ಹಾಗೂ ಸ್ನಾನಗಟ್ಟ ಸಂಪೂರ್ಣ ಮುಳುಗಡೆಯಾಗಿವೆ. ಚಕ್ರತೀರ್ಥ ಕೋದಂಡರಾಮ ದೇಗುಲಕ್ಕೆ ಹೋಗುವ ಕಾಲು ದಾರಿಗೆ ನೀರು ನುಗ್ಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದರೆ ಕಾಲು ದಾರಿ ಬಂದ್ ಆಗುವ ಸಾಧ್ಯತೆಯಿದೆ.
ಜಲಾಶಯದ ಎರಡು ಅಡಿ ಎತ್ತರದ 20 ಗೇಟ್ ಹಾಗೂ 1 ಅಡಿ ಎತ್ತರದ 8 ಗೇಟ್‍ಗಳ ಮೂಲಕ ನೀರು ಹೊರಬಿಡಲಾಗುತ್ತಿದ್ದು, ತುಂಗಭದ್ರಾ ನದಿದಂಡೆಗೆ ಹೊಂದಿಕೊಂಡಿರುವ ಹಂಪಿ, ಬುಕ್ಕ ಸಾಗರ, ವೆಂಕಟಾಪುರ ಗ್ರಾಮಗಳಲ್ಲಿ ಡಂಗುರ ಸಾರಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಲಾಗಿದೆ. ಜಲಾಶಯದಲ್ಲಿ ಒಟ್ಟು 99.739 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳಹರಿವು ಆಧರಿಸಿ ಲಕ್ಷಕ್ಕೂ ಅಧಿಕ ನೀರನ್ನು ನದಿಗೆ ಹರಿಸುವ ಸಾಧ್ಯತೆಯಿದೆ ಎಂದು ತುಂಗಭದ್ರಾ ಜಲಾಶಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.