ಬಳ್ಳಾರಿ: ಅದು ರಾಜ್ಯದಲ್ಲೇ ಕನ್ನಡ ಸಂಶೋಧನೆಗೆಂದೇ ಸ್ಥಾಪನೆಯಾದ ವಿಶ್ವವಿದ್ಯಾಲಯ, ಆ ವಿಶ್ವವಿದ್ಯಾಲಯದಲ್ಲಿ ಬಹುತೇಕ ನಾಡು ಕಂಡಂತ ವಿದ್ವಾಂಸರಿದ್ದಾರೆ, ಹಿರಿಯ ಸಾಹಿತಿ ಕಟ್ಟಿ ಬೆಳೆಸಿದ ವಿವಿ ಅದು, ರಾಜ್ಯದಲ್ಲೇ ಹೆಸರುವಾಸಿಯಾಗಿರೋ ಆ ವಿವಿಯು ವಿದ್ಯಾರ್ಥಿಗಳ ಸಂಶೋಧನೆಗೆ ಸಹಾಯವಾಗಬೇಕಿದ್ದ ಫೆಲೋಶಿಪ್ನ್ನು ಕಳೆದ ಎರಡು ವರ್ಷಗಳಿಂದ ನಿಲ್ಲಿಸಿದೆ.
ಕನ್ನಡ ನಾಡು ನುಡಿಯ ಸಂಶೋಧನೆಗಾಗಿ ಸ್ಥಾಪನೆಯಾದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಈಗ ಫೆಲೋಶಿಪ್ ಹಣ ಇಲ್ಲದೇ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ವಿವಿಯು SC,ST ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡೋದನ್ನು ನಿಲ್ಲಿಸಿದೆ. ಫೆಲೋಶಿಪ್ ಇಲ್ಲದೇ, ಸಂಶೋಧನೆಗೆ ಬೇಕಾದ ಸಾಮಗ್ರಿಗಳ ಖರೀದಿ ಮಾಡಲು ಸಮಸ್ಯೆಯಾಗುತ್ತಿದೆ. ಕ್ಷೇತ್ರ ಅಧ್ಯಯನಕ್ಕೆ ಹೋಗಲು ಕೂಡ ಬೇರೊಬ್ಬರ ಮೇಲೆ ಅವಲಂಬನೆಯಾಗಬೇಕು, ಇವನ್ನೆಲ್ಲಾ ಕೇಳಲು ಹೋದರೆ, ಹೋರಾಟಕ್ಕೆ ಇಳಿದರೆ, ವಿದ್ಯಾರ್ಥಿಗಳ ಹಕ್ಕನ್ನು ದಮನ ಮಾಡಲು ಕನ್ನಡ ವಿವಿಯ ಆಡಳಿತ ಮಂಡಳಿ ಮುಂದಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
SCP, TSP ಹಣವನ್ನು ವಿಧ್ಯಾರ್ಥಿಗಳ ಕ್ಷೇಮಾಭಿವೃದ್ಧಿಗೆ ಬಳಸಬೇಕೆಂಬ ನಿಯಮವಿದೆ. ಆದರೆ ವಿದ್ಯಾರ್ಥಿಗಳಿಗೆ ಫೆಲೋಶಿಪ್ ನೀಡದೇ, ಈ ಹಣವನ್ನು ಕಟ್ಟಡಗಳನ್ನು ಕಟ್ಟಲು ಬಳಸಲಾಗಿದೆ. ಅಲ್ಲದೇ SC,ST ವಿದ್ಯಾರ್ಥಿಗಳ ಫೆಲೋಶಿಪ್ ಮಾತ್ರ ಪೆಂಡಿಂಗ್ ಉಳಿಸಲಾಗಿದೆ. ಬರೋಬ್ಬರಿ ನಾಲ್ಕು ಕೋಟಿಗೂ ಅಧಿಕ ಹಣವನ್ನು ವಿಧ್ಯಾರ್ಥಿಗಳಿಗೆ ನೀಡದೇ, ಕಟ್ಟಡ ಕಟ್ಟುವ ಕಾಮಗಾರಿಗೆ ಮತ್ತು ಇತರೆ ಕಾಮಗಾರಿಗಳಿಗೆ ಬಳಿಸಿಕೊಳ್ಳಲಾಗಿದೆ. ಆ ಹಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು, ಇಲ್ಲವಾದರೆ ಹೋರಾಟವನ್ನು ಉಗ್ರ ಸ್ವರೂಪಕ್ಕೆ ಕೊಂಡೊಯ್ಯಲಾಗುತ್ತದೆ ಎಂದು ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.
ಇನ್ನೂ ವಿಧ್ಯಾರ್ಥಿಗಳ ಆರೋಪಗಳಿಗೆ ಸಂಬಂಧಿಸಿದಂತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳನ್ನು ಕೇಳಿದರೇ, ನಮಗೆ ನಿಯಮಗಳಿವೆ, SCP, TSP ಹಣವನ್ನು ನಾವು ಬೇರಾವ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿಲ್ಲ, ನಮ್ಮ ವಿವಿಯ ಕ್ರಿಯಾ ಯೋಜನೆಗಳ ಪ್ರಕಾರ ಆಯಾ ವರ್ಷ ಬಂದ ಹಣವನ್ನು ಅದೇ ವರ್ಷ ಖರ್ಚು ಮಾಡಬೇಕು. ಅದು ನಿಯಮ, ಇಲ್ಲವಾದರೇ ಆ ಹಣ ವಾಪಾಸ್ ಹೋಗುತ್ತದೆ. ಈ ವರ್ಷ ಈಗಾಗಲೇ ಎರಡು ಕಂತುಗಳಲ್ಲಿ 50 ಲಕ್ಷ ಹಣ ಬಂದಿದೆ. ಆ ಹಣವನ್ನು ವಿದ್ಯಾರ್ಥಿಗಳು ಮೊದಲು ತೆಗೆದುಕೊಳ್ಳಲಿ, ನಾನು ಮತ್ತೆ ಸರಕಾರಕ್ಕೆ ಪತ್ರ ಬರೆದು ಹೆಚ್ಚಿನ ಹಣ ತರಿಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ, ವಿವಿಯ ಅಭಿವೃದ್ಧಿಗೆ ಶ್ರಮಿಸುವೆ. ಇನ್ನೂ ಮುಂದೆ ವಿದ್ಯಾರ್ಥಿಗಳ ಖಾತೆಗಳಿಗೆ ನೇರವಾಗಿ ಹಣ ಹಾಕಿ ಎಂದು ಸರಕಾರಕ್ಕೆ ಪತ್ರ ಬರೆದಿರುವೆ. ನಾನು ವಿದ್ಯಾರ್ಥಿಗಳ ಸಂಶೋಧನೆಗೆ ಉತ್ತೇಜನ ನೀಡುವೆ ಎಂದು ಸ್ಪಷ್ಟನೆ ನೀಡಿದ್ದಾರೆ.