ಬಳ್ಳಾರಿ: ಜಿಲ್ಲೆ ವಿಭಜನೆ ಮಾಡಲು ಹೊರಟಿರುವ ಸರ್ಕಾರದ ನಿಲುವು ನೋವು ತಂದಿದೆ. ವಿಶ್ವ ಮಾನ್ಯತೆ ಪಡೆದ ಹಂಪಿ, ತುಂಗಭದ್ರಾ ಡ್ಯಾಂ ಇಲ್ಲದ ಜಿಲ್ಲೆಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.
ಇಂದು ಜಿಲ್ಲೆ ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿರುವ ಬಗ್ಗೆ ಪ್ರತಿಕ್ರಯಿಸಿರುವ ಅವರು, ಅಖಂಡ ಜಿಲ್ಲೆಯನ್ನು ಒಡೆಯುವುದನ್ನು ತಪ್ಪಿಸಲಿಕ್ಕಾಗಿ ಬಳ್ಳಾರಿಯನ್ನೇ ವಿಜಯನಗರದ ವ್ಯಾಪ್ತಿಗೆ ಸೇರಿಸಲು ನಮ್ಮ ಸಹಮತವಿದೆ. ಹಿಂದುಳಿದ ತಾಲೂಕುಗಳನ್ನೆಲ್ಲ ಒಂದು ಕಡೆ ಹಾಕಿ ಜಿಲ್ಲೆ ವಿಭನೆ ಮಾಡಿದ್ರೆ ಅಭಿವೃದ್ಧಿ ಮರೀಚಿಕೆಯಾದೀತು ಎಂದಿದ್ದಾರೆ.
ಆ ಕಾರಣದಿಂದಲೇ ಎಲ್ಲಾ ತಾಲೂಕಿನ ಜನಪ್ರತಿನಿಧಿಗಳು ಹೊಸಪೇಟೆ ಜಿಲ್ಲೆಗೆ ಸೇರ್ಪಡೆಯಾಗಲು ಬಯಸುತ್ತಿದ್ದಾರೆ. ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾಗುತ್ತಿದ್ದರೂ ಮಾತನಾಡದ ಜಿಲ್ಲೆಯ ಆಡಳಿತ ಪಕ್ಷದ ಹಿರಿಯ ಶಾಸಕರ ನಿಲುವು ಅಶ್ಚರ್ಯ ಮೂಡಿಸಿದೆ ಎಂದರು.
ಬಳ್ಳಾರಿ ಜಿಲ್ಲೆಯನ್ನು ನೆರೆಯ ಆಂಧ್ರ ಪ್ರದೇಶದಿಂದ ಉಳಿಸಿಕೊಳ್ಳಲು ಹೋರಾಟ ನಡೆದಿರುವುದು ಚರಿತ್ರೆಯ ಪುಟ ಸೇರಿದೆ. ಈ ಬಗ್ಗೆ ಜಿಲ್ಲೆಯ ಹೋರಾಟಗಾರರು, ರೈತ ಮುಖಂಡರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರ ಜೊತೆ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ತಿರ್ಮಾನ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.