ಬಳ್ಳಾರಿ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಕಾಂಗ್ರೆಸ್ - ಬಿಜೆಪಿಗರ ಗಲಾಟೆಯ ವಿಡಿಯೋಗಳು ಎಪಿಸೋಡ್ಗಳಂತೆ ರಿಲೀಸ್ ಆಗುತ್ತಿವೆ.
ಹಗರಿಬೊಮ್ಮನಹಳ್ಳಿಯ ಹಾಲಿ ಶಾಸಕ ಭೀಮಾ ನಾಯ್ಕ ಅವರು ತಮ್ಮ ಬೆಂಬಲಿಗರೊಂದಿಗೆ ಏಕಾಏಕಿ ಪುರಸಭೆ ಕಾರ್ಯಾಲಯಕ್ಕೆ ಕಾರಿನಲ್ಲಿ ಬಂದಿಳಿದಿದ್ದರು. ಇದರಿಂದ ಕುಪಿತಗೊಂಡ ಬಿಜೆಪಿಯ ಕಾರ್ಯಕರ್ತರು ಶಾಸಕ ಭೀಮಾ ನಾಯ್ಕ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿದರು ಎನ್ನಲಾಗ್ತಿದೆ.
4.30 ಸೆಕೆಂಡ್ ಇರುವ ಈ ವಿಡಿಯೋ ತುಣುಕಿನಲ್ಲಿ ಪುರಸಭೆ ಕಾರ್ಯಾಲಯದೊಳಗೆ ಕಾರಿನಲ್ಲಿ ಬಂದು ಎಂಟ್ರಿಕೊಟ್ಟ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ಅವರು, ಕಾರಿಂದ ಇಳಿದು ನೇರವಾಗಿ ಎದುರಾಳಿಗಳಾದ ಬಿಜೆಪಿ ಕಾರ್ಯಕರ್ತರತ್ತ ತೆರಳಿ ಮಾತಿಗಿಳಿದಿದ್ದನ್ನು ಕಾಣಬಹುದು. ಸ್ವತಃ ಶಾಸಕರೇ ಜಗಳಕ್ಕಿಳಿಯುತ್ತಾರೆ. ಆಗ ಎರಡು ಕಡೆಗಳ ಕಾರ್ಯಕರ್ತರ ಜಮಾವಣೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಶಾಸಕರನ್ನು ತಡೆದಿರುವ ದೃಶ್ಯಗಳನ್ನು ಕಾಣಬಹುದು.
ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನೂಕಾಟ
ಒಟ್ಟಿನಲ್ಲಿ ಈ ಗಲಾಟೆ ಸೀರಿಯಲ್ಗಳ ಎಪಿಸೋಡ್ನಂತೆ ದಿನಕ್ಕೊಂದು ವಿಡಿಯೋಗಳು ರಿಲೀಸ್ ಆಗುತ್ತಲೇ ಇವೆ. ನಿನ್ನೆ ಬಿಜೆಪಿಯ ಮುಖಂಡರೊಬ್ಬರು ಶಾಸಕರನ್ನು ಕೆರಳಿಸುವ ಮಾತು ಆಡಿಯೋ - ವಿಡಿಯೋ ರಿಲೀಸ್ ಆಗಿತ್ತು. ಇಂದು ಶಾಸಕರೇ ಜಗಳಕ್ಕಿಳಿದಿದ್ದರು ಎನ್ನಲಾದ ದೃಶ್ಯಾವಳಿಯೊಂದು ಬಿಡುಗಡೆ ಆಗಿದೆ.