ಬಳ್ಳಾರಿ: ನಗರದ ಅಧಿದೇವತೆ, ಶತಮಾನಗಳ ಇತಿಹಾಸವಿರುವ ಶ್ರೀ ಕನಕ ದುರ್ಗಮ್ಮ ದೇವಿಯ ವಾರ್ಷಿಕ ಸಿಡಿಬಂಡಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸಿಡಿಬಂಡಿ ಸಿಂಗರಿಸಿ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಮಾಡಿ, ಸಜ್ಜನ ಗಾಣಿಗ ಸಮುದಾಯದ ಜನರಿಂದ ಶತಮಾನಗಳಿಂದ ನಡೆದುಕೊಂಡು ಬಂದ ಈ ಕಾರ್ಯವನ್ನು ಜನ ನಿಷ್ಠೆಯಿಂದ ನೆರವೇರಿಸಿದ್ರು. ಗಾಣಿಗ ಸಮುದಾಯವರು ಮೂರು ಜೊತೆ ಎತ್ತುಗಳನ್ನು ದೇವಸ್ಥಾನದಲ್ಲಿ ಪ್ರದರ್ಶನ ಮಾಡಿದರು.
ಕುಂಬ ಮೆರವಣಿಗೆ : ನಗರದ ಬಸವನ ಕುಂಟೆಯಿಂದ 250 ಕುಂಬಗಳನ್ನು ಮಹಿಳೆಯರು ತಮ್ಮ ತಲೆಯ ಮೇಲೆ ಹೊತ್ತು ಕೊಂಡು ಎಸ್.ಪಿ ಸರ್ಕಲ್ ಮಾರ್ಗವಾಗಿ ಶ್ರೀ ಕನಕ ದುರ್ಗಮ್ಮ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಭಾಗವಹಿಸಿದರು. ಕಳೆದ ಎಂಟು ವರ್ಷಗಳಿಂದ ಕುಂಭ ಹೊರುವ ಪದ್ಧತಿಯಿದೆ ಎಂದು ಗುರುಸ್ವಾಮಿಗಳಾದ ಮಲ್ಲಿಕಾರ್ಜುನ, ಚಿರಂಜಿನಿ, ರಾಮಾಂಜಿನಿ ತಿಳಿಸಿದರು.
ಇನ್ನು ಉತ್ಸವ ನೋಡಲು ಆಗಮಿಸಿದ ಸಾವಿರಾರೂ ಜನರಿಗೆ 200 ಲೀಟರ್ ಮೊಸರು, 1000 ಲೀಟರ್ ಮಜ್ಜಿಗೆಯನ್ನು ಉಚಿತವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ವಿವೇಕ್ ಮತ್ತು ಸದಸ್ಯರು ವಿತರಿಸಿದರು. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರಿಂದ ಪೊಲೀಸರು ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಉತ್ಸವದಲ್ಲಿ ಸಣ್ಣದುರ್ಗಮ್ಮ ದೇವಸ್ಥಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ವೀರಗಾಸೆ, ಡೊಳ್ಳುಕುಣಿತ, ತಮಾಸೆವಾದನ, ಕಳಸ ಕುಣಿತ ಸೇರಿದಂತೆ ವಿವಿಧ ಜಾನಪದ ಕಲೆಗಳು ಅನಾವರಣ ಗೊಂಡವು.