ಬಳ್ಳಾರಿ : ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಸಂಬಂಧ ಶುಕ್ರವಾರಕ್ಕೆ ನಾಮ ಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ಜಿಲ್ಲೆಯಲ್ಲಿನ 1,738 ಸ್ಥಾನಗಳಿಗೆ ಬರೋಬ್ಬರಿ 5,149 ನಾಮ ಪತ್ರ ಸಲ್ಲಿಕೆಯಾಗಿವೆ.
ಮೊದಲನೇ ಹಂತದಲ್ಲಿ ಜಿಲ್ಲೆಯ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಹೊಸಪೇಟೆ ಮತ್ತು ಕಂಪ್ಲಿಯ 87 ಗ್ರಾಮ ಪಂಚಾಯತ್ಗಳಿಗೆ ಡಿಸೆಂಬರ್ 22ರಂದು ಮಂಗಳವಾರ ಮತದಾನ ಪ್ರಕ್ರಿಯೆ ನಡೆಯಲಿದೆ.
ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ ಒಂದು ಸ್ಥಾನಕ್ಕೆ ಹಾಗೂ ಸಿರುಗುಪ್ಪ ತಾಲೂಕಿನಲ್ಲಿ 34 ಸ್ಥಾನಗಳಿಗೆ ನಾಮಪತ್ರಗಳೇ ಸಲ್ಲಿಕೆಯಾಗಿಲ್ಲ. ಸಿರಿಗೇರಿ ಗ್ರಾಮ ಪಂಚಾಯತ್‌ನ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸುವಂತೆ ಗ್ರಾಮಸ್ಥರು ಬೇಡಿಕೆ ಮುಂದಿಟ್ಟಿದ್ದು, ನಿನ್ನೆ ಒಂದು ನಾಮಪತ್ರ ಕೂಡ ಸಲ್ಲಿಕೆಯಾಗಿಲ್ಲ.
ನ್ಯಾಯಸಮ್ಮತ ಚುನಾವಣೆಗೆ ಡಿಸಿ ಕ್ರಮ : ಗಣಿ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ಚುನಾವಣೆಯನ್ನು ಅತ್ಯಂತ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದ ಅನುಸಾರ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಈಗಾಗಲೇ ಮಾಡಿಕೊಂಡಿದೆ.
ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 5 ತಾಲೂಕುಗಳ 87 ಗ್ರಾಮ ಪಂಚಾಯತ್‌ಗಳ 818 ಮತಗಟ್ಟೆಗಳಿಗೆ 3,600 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಿ ಡಿಸಿ ಎಸ್ ಎಸ್ ನಕುಲ್ ಆದೇಶಿಸಿದ್ದಾರೆ.
ಮೊದಲನೇ ಹಂತದಲ್ಲಿ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಹೊಸಪೇಟೆ ಮತ್ತು ಕಂಪ್ಲಿ ತಾಲೂಕುಗಳ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಈ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಇದೇ ಡಿ.17ರಂದು ಆಯಾ ತಾಲೂಕಿನಲ್ಲಿಯೇ ತರಬೇತಿ ನೀಡಲಾಗುತ್ತದೆ.
ಸಿರಗುಪ್ಪದಲ್ಲಿ ಮಾತ್ರ ಡಿ.18ರಂದು ತರಬೇತಿ ನೀಡಲಾಗುತ್ತದೆ. ಆಯಾ ತಾಲೂಕಿನಲ್ಲಿಯೇ ಕಾರ್ಯನಿರ್ವಹಿಸುತ್ತಿರುವವರನ್ನೇ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಈ ಸುದ್ದಿಯನ್ನೂ ಓದಿ: ಮೊದಲನೇ ಹಂತದ ಗ್ರಾಪಂ ಚುನಾವಣೆ : ಶಿವಮೊಗ್ಗದಲ್ಲಿ 4,111 ನಾಮಪತ್ರ ಸಲ್ಲಿಕೆ
ಎರಡನೇ ಹಂತದಲ್ಲಿ ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳ ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದೆ. ಈ ತಾಲೂಕುಗಳ 145 ಗ್ರಾ.ಪಂ.ಗಳಲ್ಲಿ 1,255 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 5,528 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಈ ಅಧಿಕಾರಿಗಳಿಗೆ ಇದೇ ಡಿ. 23ರಂದು ಆಯಾ ತಾಲೂಕುಗಳಲ್ಲಿಯೇ ತರಬೇತಿ ನೀಡಲಾಗುತ್ತದೆ. ಸಂಡೂರು, ಸಿರುಗುಪ್ಪ, ಕೂಡ್ಲಿಗಿ ಮತ್ತು ಕಂಪ್ಲಿ ತಾಲೂಕುಗಳಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಸಂಡೂರು ತಾಲೂಕಿಗೆ-410 ಮತ್ತು ಸಿರಗುಪ್ಪ ತಾಲೂಕಿಗೆ- 174 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಬಳ್ಳಾರಿ ತಾಲೂಕಿನಿಂದ ನಿಯೋಜಿಸಲಾಗಿದೆ.
ಅದೇ ರೀತಿ ಕಂಪ್ಲಿ-105 ಮತ್ತು ಕೂಡ್ಲಿಗಿ-48 ಮತಗಟ್ಟೆ ಅಧಿಕಾರಿಗಳು ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳನ್ನು ಹೊಸಪೇಟೆ ತಾಲೂಕಿನಿಂದ ನಿಯೋಜಿಸಲಾಗಿದೆ. ಈ ಸದರಿ ತಾಲೂಕುಗಳಿಗೆ ನಿಯೋಜಿಸಲಾದ ಪಿಆರ್ಒ ಮತ್ತು ಎಪಿಆರ್ಒಗಳು ತಮಗೆ ನಿಯೋಜಿಸಲಾಗಿರುವ ತಾಲೂಕುಗಳಿಗೆ ತೆರಳಿ ತರಬೇತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.