ಬಳ್ಳಾರಿ: ಗಣಿನಗರಿ ಬಳ್ಳಾರಿ ಮಹಾನಗರ ವ್ಯಾಪ್ತಿಯಲ್ಲಿ ಬರುವ ಅರಣ್ಯ ಇಲಾಖೆ ಸುಪರ್ದಿಗೆ ಬರುವ ಸರ್ಕಾರಿ ಜಾಗವನ್ನ ಒತ್ತುವರಿ ಮಾಡಿದ್ದಲ್ಲದೇ, ಅಕ್ರಮವಾಗಿ ಮಾರಾಟ ಮಾಡಿರೋ ಆರೋಪದಡಿ ಒಂಬತ್ತು ಮಂದಿ ವಿರುದ್ಧ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೌದು, ಬಳ್ಳಾರಿ ಮಹಾನಗರದ ಕೌಲ್ ಬಜಾರ್ನ ಮೊದಲನೇಯ ಹಾಗೂ ಎರಡನೇಯ ಗೇಟ್ ನಡುವೆ ಬರುವ ಅರಣ್ಯ ಇಲಾಖೆಯ ಅಂದಾಜು 4,200 ಚದರ ಅಡಿ ವಿಸ್ತೀರ್ಣದ (60*70) ಜಾಗವನ್ನ ಸೈಯದ್ ಬಾಷಾ ಹಾಗೂ ಎಂ.ಎಸ್.ಜಾಕೀರ್ ಹುಸೇನ್, ಜಿ.ಅಶೋಕಕುಮಾರ ಎಂಬುವವರು ದಶಕದ ಹಿಂದೆಯೇ ಅರಣ್ಯ ಇಲಾಖೆಯ ಗಮನಕ್ಕೂ ತರದೇ ಒಳಗೊಳಗೆ ತಮ್ಮ ಹೆಸರಿಗೆ ಮಾಡಿಕೊಂಡಿದ್ದಲ್ಲದೇ, ಅದನ್ನ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿಗೆ ಮಾರಾಟ ಮಾಡಿದ್ದಾರೆ. ಆ ಜಾಗವನ್ನ ಖರೀದಿಸಿ, ಜಾಗದಲ್ಲಿ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿನ ಬೋರ್ಡ್ ಹಾಕಿದಾಗ ಇದು ಬೆಳಕಿಗೆ ಬಂದಿದೆ.
ಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿನ ಬೋರ್ಡ್ ಅನ್ನ ಆ ಜಾಗದಲ್ಲಿ ಹಾಕದೇ ಹೋಗದಿದ್ದರೆ ಈ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂಬುದೇ ತಿಳಿಯುತ್ತಿರಲಿಲ್ಲ. ಆ ಒಂದು ಬೋರ್ಡ್ ಇಡೀ ಅಧಿಕಾರ ವರ್ಗವನ್ನೇ ಬೆಚ್ಚಿ ಬೀಳಿಸಿದ್ದಲ್ಲದೇ, ಅಕ್ರಮವಾಗಿ ಮಾರಾಟ ಮಾಡಿದವರ ವಿರುದ್ಧ ದಾವೆ ಹೂಡುವ ಹಂತಕ್ಕೆ ತಲುಪಿಸಿದೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ನೀಡಿದ ದೂರಿನ ಅನ್ವಯ ಬಳ್ಳಾರಿ ತಹಸೀಲ್ದಾರ್ ರೆಹಾನ್ ಪಾಷಾ ಅವರು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೋಟ್ಯಂತರ ರೂ.ಗಳ ಬೆಲೆಬಾಳುವ ಸರ್ಕಾರಿ ಜಾಗವನ್ನ 1.57 ಕೋಟಿಗೆ ಮಾರಾಟ: ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ ಮುಖ್ಯರಸ್ತೆಯಲ್ಲಿರುವ ಈ ಜಾಗ ಕೋಟ್ಯಂತರ ರೂ.ಗಳಿಗೆ ಬೆಲೆ ಬಾಳುತ್ತೆ. ಅದನ್ನ ಕೇವಲ 1.57 ಕೋಟಿಗೆ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿಗೆ ಮಾರಾಟ ಮಾಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಳ್ಳಾರಿ ತಹಸೀಲ್ದಾರ್ ರೆಹಾನ್ ಪಾಷಾ ಅವರು, ಅರಣ್ಯ ಇಲಾಖೆಗೆ ಸೇರಿದ್ದ ಈ ಜಾಗದ ನಕಲಿ ದಾಖಲೆಗಳನ್ನ ಖಾಸಗಿ ವ್ಯಕ್ತಿಗಳು ಸೃಷ್ಟಿಸಿ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿಗೆ ಮಾರಾಟ ಮಾಡಿದ್ದಾರೆ. ಆ ಜಾಗದಲ್ಲಿ ಈ ಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿನವರು ಬೋರ್ಡ್ ಹಾಕಿರೋದರಿಂದಲೇ ಬೆಳಕಿಗೆ ಬಂದಿದೆ. ಹೀಗಾಗಿ, ಒಂಬತ್ತು ಮಂದಿಯ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.
ಹಾಲಿ ಭೂದಾಖಲೆಗಳ ಸಹಾಯಕ ನಿರ್ದೇಶಕಿ ಸುಮಾ ನಾಯ್ಕ, ನಿವೃತ್ತ ಭೂಮಾಪಕರಾದ ಸಿ.ಪ್ರಹ್ಲಾದ್, ಮಹಮ್ಮದ ಹುಸೇನ್, ನಿವೃತ್ತ ಭೂದಾಖಲೆಗಳ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ, ಸೈಯದ್ ಬಾಷಾ, ಎಂ.ಎಸ್. ಜಾಕೀರ್ ಹುಸೇನ್, ಅಶ್ರಫ್ ಅಲಿ, ಸುಕೋ ಸೌಹಾರ್ದ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಎಸ್.ಅಗ್ನಿಹೋತ್ರಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಹಸೀಲ್ದಾರ ರೆಹಾನ್ ಪಾಷಾ ಹೇಳಿದ್ದಾರೆ.
ಇನ್ಮುಂದೆ ಸರ್ಕಾರಿ ಜಾಗವನ್ನ ಒತ್ತುವರಿ ಮಾಡಿದವರ ವಿರುದ್ಧ ನಿರಂತರವಾಗಿ ಹದ್ದಿನ ಕಣ್ಣಿಡಲಾಗುವುದು. ಯಾರೇ ಒತ್ತುವರಿ ಅಥವಾ ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಬಳ್ಳಾರಿ ತಾಲೂಕು ಆಡಳಿತ ಸದಾ ಸಿದ್ಧವಾಗಿರುತ್ತೆ ಎಂದು ತಹಸೀಲ್ದಾರ್ ರೆಹಾನ್ ಪಾಷಾ ಎಚ್ಚರಿಕೆ ನೀಡಿದ್ದಾರೆ.