ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ದರೋಜಿ ಗ್ರಾಮದ ವಿಶೇಷಚೇತನ ಯುವಕ ಗೋಪಿಚಂದ್ ಎಲ್ ಅವರು ಚೀನಾದ ಹ್ಯಾಂಗ್‍ಝೌನಲ್ಲಿ ನಡೆಯುವ 4ನೇ ಏಷ್ಯನ್ ಪ್ಯಾರಾ ಗೇಮ್ಸ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಅ.22ರಿಂದ 29ರ ವರೆಗೆ ಪ್ಯಾರಾ ಗೇಮ್ಸ್ ನಡೆಯಲಿದ್ದು, ಗೋಪಿಚಂದ್ 400 ಮೀ ಫ್ರೀ ಸ್ಟೈಲ್ ಹಾಗೂ 100 ಮೀ ಬ್ಯಾಕ್ ಸ್ಟ್ರೋಕ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಕ್ರೀಡಾ ಪ್ರಾಧಿಕಾರ ನವದೆಹಲಿಯ ಜೆಎಲ್‍ಎನ್ ಕ್ರೀಡಾ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 17 ರ ವರೆಗೆ ತರಬೇತಿ ಪಡೆದುಕೊಂಡಿದ್ದಾರೆ.
ಗೋಪಿಚಂದ್ ಚಿಕ್ಕಂದಿನಿಂದ ಈಜು ಪಟುವಾಗಿದ್ದು, ಹುಟ್ಟಿನಿಂದ ವಿಶೇಷಚೇತನವಾಗಿದ್ದರೂ ಈಜು ಕ್ರೀಡೆಯೊಳಗೆ ಉತ್ತಮ ಪಟುವಾಗಿದ್ದಾರೆ. ತಂದೆ ಮತ್ತು ತಾಯಿ ಇಬ್ಬರು ತೋರಣಗಲ್ಲಿನ ಜಿಂದಾಲ್ ಕಂಪನಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಬಡತನದ ನಡುವೆ ಸಹ ಮಗ ಗೋಪಿಚಂದ್ ಅವರ ಹೆಚ್ಚಿನ ಅಭ್ಯಾಸಕ್ಕಾಗಿ ಬೆಂಗಳೂರಿನ ವೈಟ್‍ಫೀಲ್ಡ್‍ನ ಮೌಂಟ್ ಲಿಟೇರಾ ಜೀ ಶಾಲೆಯಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.
ಗೋಪಿಚಂದ್ ಅರ್ಜುನ್ ಪ್ರಶಸ್ತಿ ವಿಜೇತ ಶರತ್ ಗಾಯಕ್‍ವಾಡ್ ಮತ್ತು ರಜನಿ ಲಕ್ಕ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ 25 ಚಿನ್ನದ ಪದಕ ಹಾಗೂ 08 ಬೆಳ್ಳಿ ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. 2021ರಲ್ಲಿ ಬಹ್ರೇನ್‍ನಲ್ಲಿ ನಡೆದ ಇಂಟರ್‍ನ್ಯಾಷನಲ್ ಏಷ್ಯನ್ ಯೂಥ್ ಪ್ಯಾರಾ ಗೇಮ್ಸ್, 2022ರಲ್ಲಿ ಕೈರೋನಲ್ಲಿ ನಡೆದ ಪ್ಯಾರಾ ಸ್ವಿಮ್ಮಿಂಗ್ ಗೇಮ್ಸ್‍ನಲ್ಲಿ ಭಾಗವಹಿಸಿದ್ದರು. ಕ್ರೀಡಾಪಟು ಗೋಪಿಚಂದ್ ಅವರ ಸಾಧನೆ ಮುಂದುವರಿದು ದೇಶಕ್ಕೆ ಪದಕ ತರುವಂತಾಗಲೆಂದು ಜಿಲ್ಲಾಡಳಿತವು ಶುಭ ಹಾರೈಸಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂಓದಿ: ವಿಶ್ವಕಪ್ ಕ್ರಿಕೆಟ್: ಫರ್ಗುಸನ್, ಸ್ಯಾಂಟ್ನರ್ ದಾಳಿಗೆ ಅಫ್ಘಾನ್ ಅಪ್ಪಚ್ಚಿ; ನ್ಯೂಜಿಲೆಂಡ್‌ಗೆ 149 ರನ್ಗಳ ಗೆಲುವು