ಬಳ್ಳಾರಿ: ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡುವುದಾದರೆ ಸಚಿವ ಶ್ರೀರಾಮುಲುಗೆ ನೀಡಲಿ, ಅವರನ್ನು ಬಿಟ್ಟು ಬೇರೆ ಸಚಿವರಿಗೆ ನೀಡಿದರೇ ಜಿಲ್ಲೆ ಬಗ್ಗೆ ಅವರಿಗೆ ಏನು ಗೊತ್ತಿರುವುದಿಲ್ಲ ಎನ್ನುವ ಮೂಲಕ ರಾಮುಲು ಪರ ಸಚಿವ ಆನಂದ್ ಸಿಂಗ್ ಬ್ಯಾಟ್ ಬೀಸಿದ್ದಾರೆ.
ಓದಿ: ಕ್ವಾರಿ ನಡೆಸುತ್ತಿರೋದು ಮಂತ್ರಿಗಳ ಸಂಬಂಧಿ ಎಂಬ ಮಾಹಿತಿ ಇದೆ : ದಿನೇಶ್ ಗುಂಡೂರಾವ್
ಬಳ್ಳಾರಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ವಿಜಯನಗರ ಜಿಲ್ಲೆ ರಚನೆಯಾದ ಬಳಿಕ ನನ್ನ ಬಳಿಯಿರುವ ಬಳ್ಳಾರಿ ಉಸ್ತುವಾರಿ ಕುರಿತು ಅನೇಕ ಚರ್ಚೆ ನಡೆಯುತ್ತಿದೆ. ಹಾಗೊಂದು ವೇಳೆ ಉಸ್ತುವಾರಿ ಬದಲಾಯಿಸುವುದಾದರೇ ಇದೇ ಜಿಲ್ಲೆಯವರಾದ ಸಚಿವ ಶ್ರೀರಾಮುಲುಗೆ ನೀಡಲಿ, ಇಲ್ಲದಿದ್ದರೇ ನಾನೇ ನಿಭಾಯಿಸುವೆ. ಬೇರೆ ಸಚಿವರಿಗೆ ಬಳ್ಳಾರಿ ಉಸ್ತುವಾರಿ ನೀಡಿದರೇ ನಾನೇ ಸಿಎಂಗೆ ಮನವಿ ಮಾಡಿ ಬಳ್ಳಾರಿ ಉಸ್ತುವಾರಿಯಾಗಿ ಮುಂದುವರೆಯುವೆ ಎಂದರು.
ಇನ್ನೂ ಉಸ್ತುವಾರಿ ಬದಲಾವಣೆ ಮಾಡಬೇಕು ಎಂದಿದ್ದ ಶಾಸಕ ಸೋಮಶೇಖರರೆಡ್ಡಿ ಹೇಳಿಕೆಗೆ ಟಾಂಗ್ ಕೊಟ್ಟ ಆನಂದ್ ಸಿಂಗ್, ಶಾಸಕ ಸೋಮಶೇಖರರೆಡ್ಡಿ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲುಗೆ ಜಿಲ್ಲಾ ಉಸ್ತುವಾರಿ ಕೊಡಿ ಎಂದು ಮನಸು ಪೂರ್ತಿಯಾಗಿ ಹೇಳಿಲ್ಲ. ಅರ್ದಂಬರ್ಧ ಮನಸ್ಸಿನಿಂದ ಸಚಿವ ಶ್ರೀರಾಮುಲುಗೆ ಕೊಡಿ ಎಂದು ಹೇಳಿದ್ದಾರೆ. ಅಲ್ಲದೇ, ಶ್ರೀರಾಮುಲು ಬಂದರೆ ಓಕೆ, ಇಲ್ಲಾಂದ್ರೆ ಬೇರೆಯವರಿಗೆ ಕೊಡಿ ಎಂದಿದ್ದಾರೆ. ಇಲ್ಲವೇ, ಉಸ್ತುವಾರಿ ನನಗೆ ನೀಡಿದರೇ ನಿಭಾಯಿಸುವೆ ಎಂದಿದ್ದಾರೆ.
ಆದರೆ, ಸೋಮಶೇಖರ ರೆಡ್ಡಿಗಂತೂ ಜಿಲ್ಲಾ ಉಸ್ತುವಾರಿ ಆಗೋಕೆ ಆಗಲ್ಲ. ಉಸ್ತುವಾರಿಯಾಗುವುದಕ್ಕೂ ಮುಂಚೆ ಮಂತ್ರಿಯಾಗಬೇಕು. ಅಲ್ಲದೇ ಶಾಸಕ ರೆಡ್ಡಿ ಕೂಡ ನಾನು ಆಕಾಂಕ್ಷಿ ಅಲ್ಲ ಅಂತ ಹೇಳಿದ್ದಾರೆ. 2023ರಲ್ಲಿ ಮಂತ್ರಿಯಾದ ಬಳಿಕ ಅವರು ಉಸ್ತುವಾರಿ ವಹಿಸಿ ಕೊಳ್ಳಬಹುದು ಎನ್ನುವ ಮೂಲಕ ಸೋಮಶೇಖರ ರೆಡ್ಡಿಗೆ ಸಚಿವ ಆನಂದ್ ಸಿಂಗ್ ಟಾಂಗ್ ನೀಡಿದ್ದಾರೆ.