ಬಳ್ಳಾರಿ: ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿ ಪರಭಾರೆ ಮಾಡಲು ಹೊರಟಿರುವ ರಾಜ್ಯ ಸರ್ಕಾರಕ್ಕೆ ಗಣಿನಾಡಿನ ವಕೀಲರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕುರಿ ಸಾಕಾಣಿಕೆಗೆ ತಮಗೂ ಭೂಮಿ ಕೊಡಿ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ.
ಜಿಲ್ಲೆಯ ಕುಡಿತಿನಿ ಪಟ್ಟಣದ ನಿವಾಸಿಯಾಗಿರುವ ವಕೀಲ ಟಿ.ಕೆ. ಕಾಮೇಶ ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ನೂತನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರ ಮುಖೇನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ರವಾನಿಸಿದ್ದಾರೆ.
ಈ ಕುರಿತು 'ಈಟಿವಿ ಭಾರತ'ನೊಂದಿಗೆ ಮಾತನಾಡಿದ ಕಾಮೇಶ ಅವರು, ಕೇವಲ 1.20 ಲಕ್ಷ ರೂ.ಗೆ ಎಕರೆಯಂತೆ ಜಿಂದಾಲ್ಗೆ ಭೂಮಿ ಪರಭಾರೆ ಮಾಡಿರೋದಕ್ಕೆ ನನ್ನ ವಿರೋಧವಿದೆ. ನೂರಾರು ಕೋಟಿ ರೂ.ಗಳ ತೆರಿಗೆಯನ್ನು ಜಿಂದಾಲ್ ಕಂಪನಿ ವಂಚಿಸಿದೆ. ಅದರ ವಸೂಲಿಗೂ ಈ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಜಿಂದಾಲ್ ಕಂಪನಿಯಂತೆ ನಾನೇನು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಲ್ಲ. ಜನರನ್ನ ಅಕ್ರಮವಾಗಿ ಒಕ್ಕಲೆಬ್ಬಿಸೋಲ್ಲ.
ರಾಜ್ಯ ಸರ್ಕಾರವು ಎಕರೆಗೆ 1.20 ಲಕ್ಷ ರೂ.ಗೆ ಕೊಡ್ತಿದ್ದೀರಿ. ನಾನು ಎಕರೆಗೆ 2 ಲಕ್ಷ ರೂಪಾಯಿ ಕೊಡ್ತೀನಿ. ನನಗೂ 50 ಎಕರೆ ಭೂಮಿ ಕೊಡಿ. ಅಲ್ಲಿ ಕುರಿ ಸಾಕಾಣಿಕೆ ಮಾಡ್ತೀನಿ ಎಂದು ಕಾಮೇಶ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಜಿಂದಾಲ್ ಸಂಸ್ಥೆಗೆ 3,667 ಎಕರೆ ಭೂಮಿ ಪರಭಾರೆ ಮಾಡುವ ಸರ್ಕಾರದ ನಿರ್ಧಾರ ಪ್ರಕಟ ಆದಾಗಿನಿಂದ ಜನರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ.
ನಾನು ನಿಯತ್ತಾಗಿ ಕೆಲಸ ಮಾಡ್ತೀನಿ. 50 ಎಕರೆ ಭೂಮಿಯಲ್ಲಿ ಕುರಿ ಸಾಕಾಣಿಕೆ ಮಾಡೋದರಿಂದ ಇಲ್ಲಿನ ನೂರಾರು ಜನಕ್ಕೆ ಉದ್ಯೋಗ ಸಿಕ್ಕಂತಾಗುತ್ತೆ. ಹೀಗಾಗಿ ನನಗೂ ಭೂಮಿ ಕೊಡಿ ಅಂತಾ ಕಾಮೇಶ ಅವರು ಮೈತ್ರಿ ಸರ್ಕಾರಕ್ಕೆ ಪತ್ರದ ಮುಖೇನ ಮನವಿ ಮಾಡಿದ್ದಾರೆ.