ಹೊಸಪೇಟೆ : ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಹೊಸಪೇಟೆ ಮೂಲದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಭಾರಿ ಪ್ರತಿಭಟನೆ ನಡೆಯುತ್ತಿತ್ತು. ನ್ಯಾಯಕ್ಕಾಗಿ ಆಗ್ರಹಿಸಿ ಬಾಲಕಿ ಕುಟುಂಬಸ್ಥರು ತಾಲೂಕಿನ ತಾಳೆಬಸಾಪುರ ತಾಂಡದಲ್ಲಿ ಮೃತದೇಹವನ್ನು ಇಟ್ಟು ಪ್ರತಿಭಟಿಸುತ್ತಿದ್ದರು.
ಇದೀಗ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕಾಯಿತು.
ಅತ್ಯಾಚಾರ ಮಾಡಿ ಕೊಲೆ ಮಾಡಿರುವವರಿಗೆ ಗಲ್ಲು ಶಿಕ್ಷೆ ನೀಡಬೇಕು. ಬಾಲಕಿಯ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕು. ಅಲ್ಲದೇ ಪ್ರಕರಣವನ್ನು ಮಂಡ್ಯದಿಂದ ಹೊಸಪೇಟೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರು ಪ್ರತಿಭಟನಾ ಸ್ಥಳಕ್ಕೆ ಬಂದು ಆ್ಯಂಬುಲೆನ್ಸ್ನಲ್ಲಿದ್ದ ಬಾಲಕಿಯ ಮೃತದೇಹಕ್ಕೆ ಹಾರವನ್ನು ಹಾಕಿದರು. ಬಳಿಕ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿ, ಹಲವಾರು ಸಮುದಾಯದಲ್ಲಿ ಶೋಷಿತ ಮಹಿಳೆಯರು ಇದ್ದಾರೆ.
ಅವರ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಮೊದಲಬಾರಿಗೆ ಜಿಲ್ಲಾ ಖನಿಜ ನಿಧಿ (ಡಿಎಂಎಫ್)ಯನ್ನು ಬಳಕೆ ಮಾಡಲಾಗುತ್ತಿದೆ. ನರೇಗಾ ಕೆಲಸವನ್ನು 100 ದಿನಕ್ಕಿಂತ ಹೆಚ್ಚು ಮಾಡಲು ಬರುವುದಿಲ್ಲ. ಅದಕ್ಕೆ ಕಾನೂನುಗಳಿವೆ ಎಂದರು.
ಬಾಲಕಿ ಕುಟುಂಬಕ್ಕೆ ಮತ್ತೊಮ್ಮೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಜಮೀನು, ಪರಿಹಾರ ಹಾಗೂ ಮುಖ್ಯಮಂತ್ರಿ ನಿಧಿಯಿಂದ ಪರಿಹಾರವನ್ನು ಜಿಲ್ಲಾಡಳಿತದಿಂದ ಕೊಡಿಸಲಾಗುವುದು. ಪ್ರಕರಣವನ್ನು ಹೊಸಪೇಟೆಗೆ ವರ್ಗಾವಣೆ ಮಾಡುವ ಕುರಿತು ಜಿಲ್ಲಾವರಿಷ್ಠಾಧಿಕಾರಿಯೊಂದಿಗೆ ಚರ್ಚೆ ಮಾಡಲಾಗುವುದು. ಬಾಲಕಿಯ ಆತ್ಮಕ್ಕೆ ಶಾಂತಿ ಸಿಗಲು ಅಂತ್ಯಸಂಸ್ಕಾರಕ್ಕೆ ಎಲ್ಲರು ಸಹಕರಿಸಬೇಕು ಎಂದರು.
ತಾಂಡಗಳಲ್ಲಿ 2ಇ ಎನ್ನುವ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಖಾಸಗಿ ಪ್ರದೇಶದಲ್ಲಿ ತಾಂಡಗಳು ಇದ್ದರೇ ಆಕ್ಷೇಪಣೆ ಅವಕಾಶವನ್ನು ನೀಡಲಾಗುತ್ತಿದೆ. ಈಗಾಗಲೇ 198 ತಾಂಡಗಳನ್ನು ಗುರುತಿಸಲಾಗಿದೆ ಎಂದು ತಿಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಇದ್ದರು.