ಬಳ್ಳಾರಿ: ಆಂಜನೇಯ ಸ್ವಾಮಿ ಅನುಗ್ರಹ ಮಾಡಿದಾಗಲೇ ನಾನು ಸಚಿವ ಸ್ಥಾನ ಪಡೆಯುವೆ, ಅಲ್ಲಿಯವರೆ ಹೀಗೆ ಇರುವೆ. ಸಚಿವ ಸ್ಥಾನಕ್ಕಾಗಿ ಯಾರ ಹಿಂದೆಯೂ ದುಂಬಾಲು ಬೀಳಲ್ಲ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ನಗರದ ಬಾಲ ಭಾರತಿ ಶಾಲೆಯ ಆವರಣದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಬಳಿಕ ಮಾತನಾಡಿದರು. ರಾಜ್ಯ ಸಚಿವ ಸಂಪುಟದಲ್ಲಿ ಈಗಾಗಲೇ ನನ್ನ ಸಹೋದರನಂತಿರುವ ಸಚಿವ ಆನಂದ ಸಿಂಗ್ ಇದ್ದಾರೆ. ಹೀಗಿರುವಾಗ ನನಗ್ಯಾಕೆ ಬೇಕು ಸಚಿವ ಸ್ಥಾನ. ನಾನಂತೂ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಅದರ ಹಿಂದೆ ಯಾವತ್ತಿಗೂ ದುಂಬಾಲು ಬೀಳಲ್ಲ. ಆ ಆಂಜನೇಯ ಸ್ವಾಮಿ ಅನುಗ್ರಹಿಸಿದಾಗಲೇ ನಾನು ಸಚಿವ ಸ್ಥಾನ ಪಡೆಯುವೆ. ಹಾಗೊಂದು ವೇಳೆ ಹೈಕಮಾಂಡ್ ಒಪ್ಪಿ ನನಗೆ ಸಚಿವ ಸ್ಥಾನ ನೀಡಿದರೆ, ಸ್ವೀಕರಿಸುವೆ ಎಂದರು.
ಇಂದು ನಮ್ಮ ಯುವಕರು ರಕ್ತದಾನ ಮಾಡಿ ರೋಗಿಗಳ ಜೀವ ಉಳಿಸಲು ಮುಂದಾಗಿದ್ದಾರೆ. ಅವರು ಕೊಡುವ ಒಂದು ಹನಿ ರಕ್ತ ರೋಗಿಗಳ ಜೀವ ಉಳಿಸಲಿದೆ. ಯುವಕರು ದೇಶಕ್ಕೆ ಆಪತ್ತು ಬಂದಾಗ ರಕ್ಷಣೆಗೆ ಮುಂದಾಗಬೇಕು. ದೇಶ ವ್ಯಾಪಿ ಪ್ರಧಾನಿ ಮೋದಿಯವರ 70 ನೇ ವರ್ಷದ ಜನ್ಮ ದಿನವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.