ಬಳ್ಳಾರಿ: ಯಾರು ಏನೇ ಹೇಳಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ವಜ್ರ ಇದ್ದಂತೆ ಎಂದು ಕೆಆರ್‌ಪಿಪಿ ಪಕ್ಷದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಪತ್ನಿ ಗಾಲಿ ಲಕ್ಷ್ಮೀ ಅರುಣಾ ಅವರು ಹೇಳಿದರು. ಬಳ್ಳಾರಿ ನಗರದ ಹವಾಂಭಾವಿ ಬಳಿ ನಡೆದ ಕೆಆರ್‌ಪಿಪಿ ಪಕ್ಷದ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು. ಜನಾರ್ದನರೆಡ್ಡಿ ಯಾರನ್ನು ಬೆಳೆಸಿದರೋ ಅವರೇ ಈಗ ರೆಡ್ಡಿ ಅವರನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗಿದ್ದಾರೆ ಎಂದರು.
ರಾಜಕೀಯ ಕುತಂತ್ರದಿಂದ ನಮ್ಮ ಕುಟುಂಬ ಸಂಕಷ್ಟದಲ್ಲಿದೆ. ಜನಾರ್ದನರೆಡ್ಡಿ ನಾಲ್ಕು ವರ್ಷ ಜೈಲಿಗೆ ಹೋದಾಗ ನಾವು ಮನೆಯಲ್ಲಿ ಹಬ್ಬ ಮಾಡಿಲ್ಲ. ಭಗವಂತ ನಮ್ಮ ಕುಟುಂಬಕ್ಕೆ ಎಲ್ಲವನ್ನೂ ದಯಪಾಲಿಸಿದ್ದಾನೆ. ಆದರೆ ನಮ್ಮವರು, ನಮ್ಮಿಂದ ಬೆಳೆದವರು ದೂರವಾದರು ಎಂದರು. ಕರುಣೆ ಇಲ್ಲದ ರಾಜಕೀಯ ಗುಂಪು ತಯಾರಾಯ್ತು. ಆ ಗುಂಪಿನಲ್ಲಿ ನಮ್ಮವರು ಸೇರಿಕೊಂಡಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ಜನಾರ್ದನರೆಡ್ಡಿ ರಾಜಿ ಆಗುವುದಿಲ್ಲ ಎಂದು ಹೇಳಿದರು.
ನಮ್ಮವರೇ ತಂತ್ರ ಕುತಂತ್ರದಿಂದ ಜನಾರ್ದನರೆಡ್ಡಿ ಅವರನ್ನು ಬಳ್ಳಾರಿಯಿಂದ ದೂರ ಮಾಡಿದ್ದಾರೆ. ಬಳ್ಳಾರಿ ನಗರ ನಾನು ಅಭ್ಯರ್ಥಿ ಎಂದು ಘೋಷಣೆಯಾಯ್ತು. ಆಗ ಸೋಮಶೇಖರ್ ರೆಡ್ಡಿ ಆಪ್ತರೊಬ್ಬರು ನನಗೆ ಬಳ್ಳಾರಿ ನಗರದಿಂದ ಸ್ಪರ್ಧೆ ಬೇಡ ಅಂತ ಹೇಳಿದರು. ನೀವು ದೇವರಹಿಪ್ಪರಗಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಅಂತ ಹೇಳಿದರು. ಜನಾರ್ದನರೆಡ್ಡಿ ಅವರನ್ನು ಬಳ್ಳಾರಿಯಿಂದ ದೂರ ಮಾಡಿದಂತೆ ನನ್ನನ್ನು ದೂರ ಮಾಡಬಹುದು. ಹೀಗಾಗಿ ನಾನು ಬಳ್ಳಾರಿ ನಗರದಿಂದಲೇ ಸ್ಪರ್ಧೆ ಮಾಡೋದಾಗಿ ಘೋಷಣೆ ಮಾಡಿದೆ ಎಂದು ಪರೋಕ್ಷವಾಗಿ ತಮ್ಮ ಮಾವ ಸೋಮಶೇಖರ್‌ರೆಡ್ಡಿ ವಿರುದ್ಧ ಲಕ್ಷ್ಮೀ ಅರುಣಾ ವಾಗ್ದಾಳಿ ನಡೆಸಿದರು.
ನಮ್ಮವರು ನಮ್ಮ ಬಗ್ಗೆ ಊರಿನಲ್ಲಿ ಇರುವುದಿಲ್ಲ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮನ್ನು ಬಳ್ಳಾರಿಯಿಂದ ದೂರ ಮಾಡಿದವರು ತಮ್ಮ ನೈತಿಕತೆ ಬಗ್ಗೆ ಪ್ರಶ್ನೆ ಮಾಡಿಕೊಳ್ಳಲಿ, ಬಹಿರಂಗ ಸಮಾವೇಶದಲ್ಲಿ ಸೆರಗುವೊಡ್ಡಿ ಮತ ಕೇಳಿದ ಲಕ್ಷ್ಮೀ ಅರುಣಾ, ಯಾರು ಏನೇ ಮಾತನಾಡಿದ್ರೂ ಜನಾರ್ದನರೆಡ್ಡಿ ವಜ್ರ ಎಂದು ಹೇಳಿದರು. ಇನ್ನು ಸಮಾವೇಶದಲ್ಲಿ ಗೋನಾಳ ರಾಜಶೇಖರಗೌಡ, ಮಾಜಿ ಮೇಯರ್ ವೆಂಕಟರಮಣ, ಕೋನಂಕಿ ರಾಮಪ್ಪ, ಕೋನಂಕಿ ತಿಲಕ್, ಮುನ್ನಾಭಾಯ್, ಕೊಳಗಲ್ ಅಂಜಿನಿ, ಹಂಪಿ ರಮಣ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:ಬೈಕ್ ರ್‍ಯಾಲಿ ವೇಳೆ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ: ಓರ್ವನಿಗೆ ಗಂಭೀರ ಗಾಯ