ಬಳ್ಳಾರಿ: 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕುರಿತು 2 ಕಿ.ಮೀ ನಡಿಗೆ ಜಾಗೃತಿ ಜಾಥಾಕ್ಕೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಚಾಲನೆ ನೀಡಿದರು.
ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಮೋತಿ ವೃತ್ತದವರೆಗೆ ಬಳ್ಳಾರಿ ಸಂಚಾರಿ ಪೊಲೀಸ್ ಮತ್ತು ಸಾರಿಗೆ ಇಲಾಖೆ ನೇತೃತ್ವದಲ್ಲಿ ಜಾಥವನ್ನು ಆಯೋಜಿಸಲಾಗಿದೆ.
ನಂತರ ಮಾತನಾಡಿದ ಅವರು, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಮುಖ್ಯವಾಗಿ ವಾಹನಗಳನ್ನು ಚಾಲನೆ ಮಾಡುವವರು ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎನ್ನುವುದಾಗಿದೆ. ಇದನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ತಿಳಿಸಿದರು.
ಎಸ್.ಪಿ ಸೈದುಲ್ ಅಡಾವತ್ ಮಾತನಾಡಿ, ಬಳ್ಳಾರಿಯ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಹಂತ ಹಂತವಾಗಿ ರಸ್ತೆ ಸುರಕ್ಷತಾ ಸಪ್ತಾಹದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಶಾಲಾ ಕಾಲೇಜು, ರಸ್ತೆಗಳು ಅಣುಕು ಪ್ರದರ್ಶನ ಮಾಡುವ ಮೂಲಕ ಜಾಗೃತಿ ಮೂಡಿಸುತ್ತೇವೆ ಎಂದರು.
ಈಟಿವಿ ಭಾರತದೊಂದಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶೇಖರ್ ಮಾತನಾಡಿ, ಸಾರ್ವಜನಿಕರು ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಸುರಕ್ಷಿತವಾಗಿ ಸಂಚಾರ ಮಾಡಿದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತದೆ. ಕಡ್ಡಾಯವಾಗಿ ವಾಹನ ಸವಾರರು ಅಗತ್ಯ ದಾಖಲೆಗಳನ್ನು ಜೊತೆಗೆ ಇಟ್ಟುಕೊಳ್ಳಬೇಕೆಂದು ತಿಳಿಸಿದರು.