ಬಳ್ಳಾರಿ: ಕ್ರೀಡೆಗಳಿಂದ ದೈಹಿಕ, ಮಾನಸಿಕ ನೆಮ್ಮದಿ ಲಭ್ಯವಾಗುತ್ತದೆ ಮತ್ತು ಉತ್ತಮ ಆರೋಗ್ಯವಂತರಾಗಿ ಜೀವಿಸಬಹುದು ಎಂದು ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಹೇಳಿದರು.
ನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಬಿ.ಡಿ.ಎ.ಎ ಮೈದಾನದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ನಾರಾಯಣ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ ಫುಟ್ ಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು. ದೈಹಿಕ ಶಿಕ್ಷಕರು ತಮ್ಮ ಕ್ರೀಡಾಪಟುಗಳಿಗೆ ನೀತಿ ನಿಯಮದ ಅನುಸಾರವಾಗಿ ತರಬೇತಿ ನೀಡಬೇಕು. ಮೊದಲಬಾರಿಗೆ ಶಾಸಕರಾದಾಗ ನಾನು ಆಗಿನ ಕ್ರೀಡಾ ಸಚಿವರಾದ ಗೂಳಿಹಟ್ಟಿ ಶೇಖರ್ ಅವರಿಗೆ ಬಳ್ಳಾರಿ ಜಿಲ್ಲೆಗೆ ಫುಟ್‍ಬಾಲ್ ಕ್ರೀಡಾಂಗಣವನ್ನು ಒದಗಿಸುವಂತೆ ಪ್ರಸ್ತಾಪಿಸಿದಾಗ ಅದಕ್ಕೆ ಒಪ್ಪಿ ₹ 5 ಕೋಟಿಗಳ ಅನುಮೋದನೆ ನೀಡಲಾಯಿತು ಎಂದು ಹೇಳಿದ ಅವರು ಇಲ್ಲಿ ಪಂದ್ಯಾವಳಿ ಆಯೋಜಿಸಿದಾಗ ತಪ್ಪದೇ ಎಲ್ಲಾ ಪಂದ್ಯವಾಳಿಗಳನ್ನು ವೀಕ್ಷಿಸುತ್ತೇನೆ ಎಂದರು.
ನಂತರ ಅವರು ಇಲ್ಲಿನ ಮೈದಾನದಲ್ಲಿರುವ ಆಸನಗಳು ದುರಸ್ಥಿಗೀಡಾಗಿದ್ದು, ದುರಸ್ಥಿ ಕೈಗೊಳ್ಳಲು ಒಂದು ವಾರದೊಳಗಾಗಿ ಅಂದಾಜು ವೆಚ್ಚದ ಅನುಮೋದನೆ ಪಟ್ಟಿಯನ್ನು ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ದೈಹಿಕ ಶಿಕ್ಷಕರಾದ ಜಿ.ಮಹೇಶ್ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಇಲ್ಲಿನ ನಡೆಯುವ ರಾಜ್ಯಮಟ್ಟದ ಫುಟ್ ಬಾಲ್ ಪಂದ್ಯಾವಳಿಗೆ ಭಾಗವಹಿಸಿ ವಿಜೇತರಾದವರು ಅಂಡಮಾನನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಫುಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು ಎಂದು ತಿಳಿಸಿದರು.