ಬಳ್ಳಾರಿ: ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಬಿಟ್ಟಿದ್ದರಿಂದ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ಉಪ್ಪಳಗಡ್ಡೆಯಲ್ಲಿ ನಾಲ್ಕು ಮಂದಿ ಕುರಿಗಾಹಿಗಳ ಜೊತೆಗೆ 600ಕ್ಕೂ ಹೆಚ್ಚು ಕುರಿಗಳು ಸಿಲುಕಿಕೊಂಡಿವೆ.
ವಾರದ ಹಿಂದೆಯಷ್ಟೇ ಬಾಗೇವಾಡಿ ಗ್ರಾಮದ ನಿವಾಸಿ ಕಟ್ಟೆಮ್ಯಾಗಳ ನಾಗಪ್ಪ ಎಂಬುವವರ ಐದು ಮಂದಿ ಪುತ್ರರು 600ಕ್ಕೂ ಅಧಿಕ ಕುರಿಗಳ ಹಿಂಡನ್ನು ಹೊಡೆದುಕೊಂಡು ಹೋಗಿದ್ದರು. ಇಂದು ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಟ್ಟಿದ್ದರಿಂದ ಆ ನಾಲ್ವರು ಕುರಿಗಾಹಿಗಳು ಕುರಿಗಳೊಡನೆ ನಡುಗಡ್ಡೆಯಲ್ಲೇ ಸಿಲುಕಿಕೊಂಡಿದ್ದಾರೆ.
ಬಾಗೇವಾಡಿ ಗ್ರಾಮದಲ್ಲಿ ಹನುಮಪ್ಪನ ಗಡ್ಡೆ ಹಾಗೂ ಉಪ್ಪಳ ಗಡ್ಡೆ ಎಂಬ ಎರಡು ನಡುಗಡ್ಡೆಗಳು ಬರುತ್ತವೆ. ಅಲ್ಲದೇ, ವೇದಾವತಿ - ತುಂಗಭದ್ರಾ ಎರಡು ನದಿಗಳ ಸಂಗಮ ಇಲ್ಲಿ ಆಗುವುದರಿಂದ ಪ್ರತಿ ವರ್ಷವೂ ಇಲ್ಲಿ ಇಂತಹ ಪರಿಸ್ಥಿತಿ ಎದುರಾಗುತ್ತೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಸ್ಥಳಕ್ಕೆ ಧಾವಿಸಿದ ಸಿರುಗುಪ್ಪ ಎಂಎಲ್ಎ, ಎಸಿ:
ಬಳ್ಳಾರಿಯ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಈ ಕುರಿತು ಸಭೆಯ ಗಮನ ಸೆಳೆದಾಗ, ಅಶ್ಚರ್ಯಚಕಿತರಾದ ಡಿಸಿಎಂ ಲಕ್ಷ್ಮಣ ಸವದಿ, ತಾವು ಅಲ್ಲಿಗೆ ಹೋಗುವಂತೆ ಸೂಚಿಸಿದ್ರು. ಅದನ್ನ ಸೂಕ್ಷ್ಮವಾಗಿ ಆಲಿಸಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರೂ ಕೂಡ ಎಸಿ ರಮೇಶ ಕೋನರೆಡ್ಡಿ ಅವರಿಗೆ ಆ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದರು.
ಉಪ್ಪಳಗಡ್ಡೆಯ ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಾಹಿಗಳನ್ನು ವೀರೇಶ, ಹನುಮಪ್ಪ, ಮುದಿಯಪ್ಪ, ಮೂಕಯ್ಯ ಎಂದು ಗುರುತಿಸಲಾಗಿದೆ. ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಅಂದಾಜು 1.50 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದ್ದು, ಬೆಳಗ್ಗೆ ಒಂದು ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು.
ದಿಢೀರ್ ನದಿಗೆ ನೀರು ಬಿಟ್ಟ ಹಿನ್ನೆಲೆ ನಡುಗಡ್ಡೆಯಲ್ಲಿ ಆ ಕುರಿಗಾಹಿಗಳು ಸಿಲುಕಿದ್ದಾರೆ.
ಕಂಪ್ಲಿ ಸೇತುವೆ ಕೂಡ ಜಲಾವೃತ:
ಜಿಲ್ಲೆಯ ಕಂಪ್ಲಿ ಸೇತುವೆಯೂ ಕೂಡ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.