ಹೊಸಪೇಟೆ(ವಿಜಯನಗರ): ಬೈಕ್ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ, 25 ಬೈಕ್ಗಳನ್ನು ಪಟ್ಟಣ ಠಾಣೆಯ ಪೊಲೀಸರು ಶುಕ್ರವಾರ ಸಂಜೆ ಜಪ್ತಿ ಮಾಡಿಕೊಂಡಿದ್ದಾರೆ. ನಾಲ್ವರು ಕಳ್ಳರು ಹೊಸಪೇಟೆ ಹಾಗೂ ಸಿರುಗುಪ್ಪ ಮೂಲದವರು ಎಂದು ತಿಳಿದು ಬಂದಿದೆ.
ಹೊಸಪೇಟೆ, ಬಳ್ಳಾರಿ, ಕಂಪ್ಲಿ, ಕಮಲಾಪುರ, ಕೊಪ್ಪಳ ಹಾಗೂ ಗಂಗಾವತಿ ನಗರದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ಗಳನ್ನ ನಕಲಿ ಕೀ ಬಳಕೆ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದರು ಎಂದು ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕಳ್ಳತನ ಮಾಡಿದ್ದ ಬೈಕ್ಗಳನ್ನು ದರೂರು, ಕರೂರು, ಆಂಧ್ರಪ್ರದೇಶದ ಹೊಳಗುಂದಾ ಭಾಗದಲ್ಲಿ ಕಡಿಮೆ ದರದಲ್ಲಿ ಮಾರಟ ಮಾಡುತ್ತಿದ್ದರಂತೆ. ಪಟ್ಟಣ ಠಾಣೆಯ PSI ಎಂ.ಶ್ರೀನಿವಾಸ್ ಹಾಗೂ ಸಿಬ್ಬಂದಿ ವಾಹನ ಕಳ್ಳರ ಶೋಧ ನಡೆಸುತ್ತಿದ್ದಾಗ ಇವರು ಸಿಕ್ಕಿಬಿದ್ದಿದ್ದಾರೆ. ಆಗಸ್ಟ್ 29 ರಂದು ಮೊದಲ ಸಿಕ್ಕ ಆರೋಪಿ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಉಳಿದವರನ್ನು ಪತ್ತೆ ಹಚ್ಚಿ ಬಂಧನ ಮಾಡಿದ್ದಾರೆ.
ಇದನ್ನೂ ಓದಿರಿ: ಧಾರವಾಡ: ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನಕ್ಕೆ ನಟಿ ತಾರಾ ಭೇಟಿ, ವಿಶೇಷ ಪೂಜೆ
ಬಂಧಿತ ಆರೋಪಿಗಳ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಇವೆ. ಕೋರ್ಟ್ ಖರ್ಚು ನಿಭಾಯಿಸಲು ಕಳ್ಳತನಕ್ಕೆ ಇಳಿದಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.