ಬಳ್ಳಾರಿ: ನಾನು ಈ ಕಾರ್ಯಕ್ರಮಕ್ಕೆ ಬರುವ ಮುನ್ನ ರಸ್ತೆಯಲ್ಲಿ ಒಬ್ಬ ಹುಡುಗ ಹುಲಿಯ ಚಿತ್ರ ತೋರಿಸಿ ನನ್ನನ್ನು ಹುಲಿ ಎಂದು ಅಭಿಮಾನದಿಂದ ಕರೆದ. ನಿಜವಾಗಿಯೂ ಹುಲಿ ಬೇಟೆಯಾಡಲು ಒಮ್ಮೆ ಸಿದ್ಧವಾದರೆ ಬೇಟೆ ಆಡಿಯೇ ತೀರುತ್ತದೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದರು.
ಬಳ್ಳಾರಿ ನಗರದ 25ನೇ ವಾರ್ಡ್ನಲ್ಲಿ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು ಅವರು ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಹುಲಿ ಹಸಿವಾದಾಗ ಆಹಾರ ಎಷ್ಟು ಬೇಕೋ ಅಷ್ಟು ಸೇವಿಸುತ್ತದೆ. ಆಹಾರಕ್ಕಾಗಿ ಅದು ಬೇಟೆಯಾಡುತ್ತದೆ. ನಮ್ಮ ರಕ್ತ ಕೂಡ ಅಂತಹದ್ದು. ನಮ್ಮ ತಂದೆ ಪೊಲೀಸ್ ಪೇದೆ ಆಗಿ ಕೆಲಸ ಮಾಡಿರಬಹುದು, ಆದರೆ ನನ್ನ ತಾತಂದಿರು ರಾಜರಂತೆ ಬದುಕಿದವರು. ಅವರ ರಕ್ತ ನನ್ನಲ್ಲಿದೆ. ಅದನ್ನು ಬದಲಿಸಲಾಗದು ಎಂದರು.
ಕಳೆದ 12 ವರ್ಷಗಳಿಂದ ನಾನು ಸುಮ್ಮನೇ ಇದ್ದೇನೆ ಎಂದರೆ ನನ್ನ ಕೈಯಿಂದ ಏನೂ ಆಗುವುದಿಲ್ಲ ಎಂದರ್ಥವಲ್ಲ. ನಾನು ಒಂದೂವರೆ ವರ್ಷದಿಂದ ಮನೆಯಲ್ಲಿದ್ದೆ. ಮನೆಯಿಂದ ಹೊರ ಬಂದರೆ ಕೆಲವರು ತಲೆ ಕೆಡಿಸಿಕೊಂಡು ಆಗುವ ಕೆಲಸವೂ ಆಗುವುದಿಲ್ಲ ಎಂದು ನಾನು ಸುಮ್ಮನಿದ್ದೆ ಎಂದು ತಿಳಿಸಿದರು.
ಬಳ್ಳಾರಿಯ ಅಭಿವೃದ್ಧಿಗೆ ಬದ್ಧ: ಕಾಂಗ್ರೆಸ್, ಬಿಜೆಪಿ ಅಂತಾ ನಾನು ಹೇಳುವುದಿಲ್ಲ. ನಮ್ಮ ಕುಟುಂಬ ಬಳ್ಳಾರಿಯ ಅಭಿವೃದ್ಧಿಗೆ ಬದ್ಧವಾಗಿದೆ. ನಮ್ಮ ಕುಟುಂಬದ ಮೇಲೆ ನಿಮ್ಮ ಆಶೀರ್ವಾದ ಇರಲಿ. ನಾನು ಬೆಂಗಳೂರಿನಲ್ಲಿ ಐಷಾರಾಮಿ ಬದುಕು ನಡೆಸಬಹುದು. ಆದರೆ ನನಗೆ ನನ್ನ ಬಳ್ಳಾರಿ ಮುಖ್ಯ, ಜನಾರ್ದನ ರೆಡ್ಡಿ ಎಂದರೆ ಹೆಲಿಕಾಪ್ಟರ್ ತೋರಿಸುತ್ತಾರೆ. ಆದರೆ ನಾನು ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಹೋದರೆ ಸಮಯ ಉಳಿಯುತ್ತದೆ ಮತ್ತ ಆ ಸಮಯದಲ್ಲಿ ಜನರ ಕೆಲಸ ಮಾಡಬಹುದೆಂದು ಸಚಿವನಾಗಿದ್ದಾಗ ಹೆಲಿಕಾಪ್ಟರ್ ಖರೀದಿಸಿದೆ ವಿನಃ ಶೋಕಿಗಾಗಿ ಅಲ್ಲ ಎಂದರು.
ಬಳ್ಳಾರಿ ಜನರಿಗಾಗಿ ನನ್ನ ಬದುಕನ್ನು ಮುಡಿಪಾಗಿಡುವೆ: 12 ವರ್ಷಗಳ ನಂತರ ಮಗನಿಗಾಗಿ ಬೆಂಗಳೂರಿನಲ್ಲಿ ಒಂದು ಮನೆ ಕಟ್ಟುತ್ತಿರುವೆ. ನ್ಯಾಯಾಲಯಲ್ಲಿ ನಮ್ಮ ಪ್ರಾಮಾಣಿಕತೆಗೆ ನ್ಯಾಯ ಸಿಗುತ್ತದೆ. ನಿಮ್ಮ ದೃಷ್ಟಿಯಲ್ಲಿ ನಾವು ಯಾವತ್ತೂ ಜನರ ಜೇಬಿಗೆ ಕತ್ತರಿ ಹಾಕಿಲ್ಲ. ಯಾರಿಗೂ ನಾವು ಮೋಸ ಮಾಡಿಲ್ಲ. ಅದೃಷ್ಟದಿಂದ, ದೇವರ ಆಶೀರ್ವಾದದಿಂದ ನಾವು ಮೇಲೆ ಬಂದವರು. ನನ್ನ ಕೊನೆ ಉಸಿರಿರುವರೆಗೂ ನಾನು ಬಳ್ಳಾರಿ ಜನರಿಗಾಗಿ ಬದುಕನ್ನು ಮುಡಿಪಾಗಿಡುವೆ. ನನ್ನ ಕೊನೆ ಉಸಿರು ಬಳ್ಳಾರಿಯಲ್ಲೇ ಎಂದು ಹೇಳಿದರು.
ಬಳ್ಳಾರಿ ನಗರದ ಎಲ್ಲ ರಸ್ತೆಗಳು ಸುಂದರ ಆಗಬೇಕು. ಗುಡಿಸಲು ರಹಿತ ಜಿಲ್ಲೆ ಆಗಬೇಕು. ಬಳ್ಳಾರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಂತಾರಾಷ್ಟ್ರೀಯ ಕ್ರೀಡಾಂಗಣ ಆಗಬೇಕು ಎಂಬುದು ನನ್ನ ಕನಸಾಗಿತ್ತು. ನಾನು ನನ್ನ ಅವಧಿಯಲ್ಲಿ ಬಳ್ಳಾರಿಗೆ ಅರ್ಧ ರಿಂಗ್ ರೋಡ್ ಅಭಿವೃದ್ಧಿ ಮಾಡಿದೆ. ಇನ್ನುಳಿದ ಕೆಲಸಕ್ಕೆ ಕೇಂದ್ರ ಸಚಿವ ಗಡ್ಕರಿ ಅವರು ಅನುಮೋದನೆ ನೀಡಿದ್ದು ಆ ಕೆಲಸ ಕೂಡ ಬೇಗ ಆಗಲಿದೆ ಎಂದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಬಳ್ಳಾರಿಯಲ್ಲಿ ಕರ್ನಾಟಕ ಆಂಧ್ರದ ಜನರಿಗೆ ಅನುಕೂಲ ಆಗಲಿ ಎಂದು ಬೆಂಗಳೂರಿಗಿಂತ ಉತ್ತಮ ಆಸ್ಪತ್ರೆ ಆಗಬೇಕೆಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿದೆವು. ಈಗಾಗಲೇ ಅದು ಒಂದು ಹಂತಕ್ಕೆ ಬಂದಿದೆ. ತುರ್ತು ಸಂದರ್ಭಗಳಲ್ಲಿ ಬೆಂಗಳೂರಿನಿಂದ ನುರಿತ ತಜ್ಞ ವೈದ್ಯರನ್ನು ಕರೆಸಿ ನಮ್ಮ ಜನರಿಗೆ ಚಿಕಿತ್ಸೆ ಕೊಡಿಸಬಹುದು ಎಂದು ಹೇಳಿದರು.
ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಬಿಜೆಪಿ ಮುಖಂಡ ನೂರ್‌ಬಾಷ, ಪಾಳಿಕೆ ಸದಸ್ಯ ಹನುಮಂತ ಗುಡಿಗಂಟಿ, ಶ್ರೀನಿವಾಸ್ ಮೊದಲಿಯಾರ್, ಮೆಹಫೂಜ್ ಆಲಿ ಖಾನ್ ಸೇರಿದಂತೆ ಹಲವರು ಹಾಜರಿದ್ದರು.
ಇದನ್ನೂ ಓದಿ: ಬಳ್ಳಾರಿಗೆ ಭೇಟಿ ನೀಡಲು ಜನಾರ್ದನ ರೆಡ್ಡಿಗೆ ಅನುಮತಿ ನೀಡಿದ ಸುಪ್ರೀಂಕೋರ್ಟ್