ಬಳ್ಳಾರಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರ ಮಾಜಿ ಸಿಎಂ ಜಗದೀಶ ಶೆಟ್ಟರ್ ಇಂದು ಮತಯಾಚಿಸಿದರು.
ಸಂಗನಕಲ್ಲು ಗ್ರಾಮದಲ್ಲಿ ಅಭ್ಯರ್ಥಿ ದೇವೇಂದ್ರಪ್ಪ ಪರ ಮತಬೇಟೆ ನಡೆಸಿದರು. ಈ ದೇಶದಲ್ಲಿ ಚುನಾವಣಾ ಪರ್ವ ಶುರುವಾಗಿದೆ. ದೇಶಕ್ಕೆ ಸಮರ್ಥ ನಾಯಕತ್ವದ ಅಗತ್ಯತೆಯಿದೆ. ಹಾಗಾಗಿ, ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣೆ ಹಿಡಿಯಬೇಕಿದೆ. ಪ್ರಜ್ಞಾವಂತ ಮತದಾರರು ಮೋದಿಯವರಿಗೆ ತಮ್ಮ ಮತ ಹಾಕಬೇಕು ಎಂದು ಮನವಿ ಮಾಡಿದರು.
ಅಶ್ವಿಜಾಗೆ ಅಭಿನಂದನೆ:
ಇನ್ನು ಈ ಗ್ರಾಮ ಶೈಕ್ಷಣಿಕವಾಗಿ ಸಾಕಷ್ಟು ಮುಂದುವರಿದಿದೆ. ಗ್ರಾಮದ ವಿದ್ಯಾರ್ಥಿನಿ ಬಿ.ವಿ. ಅಶ್ವಿಜಾ ಅವರು ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 423ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ಆ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಅಲ್ಲದೆ ಇಡೀ ದೇಶದಲ್ಲೇ ಈ ಗ್ರಾಮದ ಹೆಸರು ಅಚ್ಚಳಿಯದಂತೆ ಉಳಿದಿದೆ ಎಂದು ಅಶ್ವಿಜಾಳ ಸಾಧನೆ ಕೊಂಡಾಡಿದರು.
ಉಗ್ರಪ್ಪನವರೇ ಜಮೀನಿನಲ್ಲಿ ಕೆಲಸ ಮಾಡಿದ ಅನುಭವ ಇದೆಯಾ?
ಬಿಜೆಪಿ ರೈತಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎಸ್. ಗುರುಲಿಂಗನಗೌಡ ಮಾತನಾಡಿ, ವೈ.ದೇವೇಂದ್ರಪ್ಪ ಅನಕ್ಷರಸ್ಥ. ಅವರಿಗೆ ಭಾಷೆಯ ಸಂವಹನ ಗೊತ್ತಿಲ್ಲವೆಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಹೇಳುತ್ತಿದ್ದಾರೆ. ಹಾಗಾದ್ರೆ ಉಗ್ರಪ್ಪನವರೇ ನಿಮಗೇನಾದ್ರೂ ಜಮೀನಿನಲ್ಲಿ ಕೆಲಸ ಮಾಡಿದ ಅನುಭವ ಇದೆಯಾ? ನಮ್ಮ ಪಕ್ಷದ ಅಭ್ಯರ್ಥಿ ದೇವೇಂದ್ರಪ್ಪ, ಹೊಲದಲ್ಲಿ ಕೆಲಸ ಮಾಡಿದ್ದಾರೆ. ಅದು ನಿಜವಾದ ರೈತಾಪಿ ವರ್ಗದ ಕಾಳಜಿ ಎಂದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿದರು.
ನನಗೂ ಮತ್ತು ಆತನಿಗೂ ಎರಡು ಎತ್ತುಗಳನ್ನು ಕೊಡಲಿ:
ಇನ್ನು ಇದೇ ವೇಳೆ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ ಮಾತನಾಡಿ, ನನಗೂ ಮತ್ತು ಆತನಿಗೂ(ಉಗ್ರಪ್ಪಗೂ) ಎರಡು ಎತ್ತುಗಳನ್ನು ಕೊಡಲಿ. ನಾನು ಹೊಲಕ್ಕೆ ಹೋಗುತ್ತೇನೆ, ಆತನೂ ಬರಲಿ. ವ್ಯವಸಾಯ ಮಾಡೋಣ. ಯಾರು ನಿಜವಾದ ರೈತರು ಅಂತಾ ಗೊತ್ತಾಗುತ್ತೆ ಎಂದು ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪಗೆ ಸವಾಲು ಹಾಕಿದರು.