ಬಳ್ಳಾರಿ: ಕಳೆದ ಸೆಪ್ಟೆಂಬರ್ 12ರಂದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ವಿಮ್ಸ್) ತುರ್ತು ನಿಗಾ ಘಟಕ(ಐಸಿಯು)ನಲ್ಲಿ ವಿದ್ಯುತ್ ಸ್ಥಗಿತಗೊಂಡು ರೋಗಿಗಳು ಮೃತಪಟ್ಟ ಘಟನೆ ಮಾಸುವ ಮುನ್ನವೇ ಇದೇ ವಿಮ್ಸ್‌ನ ರಕ್ತ ಸಂಗ್ರಹ ಕೊಠಡಿಯಲ್ಲಿ ನಿನ್ನೆ(ಭಾನುವಾರ) ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಮತ್ತು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, 'ವಿಮ್ಸ್‌ನ ರಕ್ತ ಸಂಗ್ರಹ ಕೊಠಡಿಯಲ್ಲಿ ಎಸಿ ಅಳವಡಿಸಲಾಗಿದೆ. ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಒಂದು ಫ್ರಿಡ್ಜ್ ಸುಟ್ಟಿದೆ. ಯಾರಿಗೂ ಏನೂ ತೊಂದರೆಯಾಗಿಲ್ಲ. ಸಂಗ್ರಹಿಸಲಾಗಿದ್ದ ಕೆಂಪು ರಕ್ತ ಹಾಗೂ ಬಿಳಿ ರಕ್ತ ಕಣಗಳ ಮಾದರಿಯನ್ನು ಟ್ರಾಮಾಕೇರ್‌ಗೆ ಸ್ಥಳಾಂತರಿಸಲಾಗಿದೆ. ರೋಗಿಗಳಿಗೆ ರಕ್ತದ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವಶ್ಯವಿದ್ದರೆ ಖಾಸಗಿ ಬ್ಲಡ್ ಬ್ಯಾಂಕ್‌ಗಳಿಂದ ರಕ್ತವನ್ನು ತರಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ' ಎಂದರು.
ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಂಸದೆ ಜೆ. ಶಾಂತಾ, ಡಿಸಿ ಪವನ್ ಕುಮಾರ್ ಮಾಲಪಾಟಿ ಹಾಗು ವಿಮ್ಸ್ ಅಧೀಕ್ಷಕ ಡಾ.ಸೋಮಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಮ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ಸಚಿವ ಸುಧಾಕರ್ ವಿರುದ್ಧ ಸ್ವಪಕ್ಷದ ಶಾಸಕರೇ ಗರಂ
ವಿಮ್ಸ್‌ನಲ್ಲಿ ಹಿಂದೆ ನಡೆದ ಘಟನೆಗಳು: ವಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಸೆಪ್ಟೆಂಬರ್ ತಿಂಗಳ 12ರಂದು ವಿದ್ಯುತ್ ಸಂಪರ್ಕ ಕಡಿತವಾಗಿತ್ತಂತೆ. 3-4 ತಾಸು ಕಳೆದರೂ ವಿದ್ಯುತ್ ಬಂದಿರಲಿಲ್ಲ. ಪರಿಣಾಮ ಐಸಿಯು ವಾರ್ಡ್ನಲ್ಲಿದ್ದ ಮೂರ್ನಾಲ್ಕು ರೋಗಿಗಳು ಆಕ್ಸಿಜನ್ ಸಮಸ್ಯೆ ಉಂಟಾಗಿ ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದ್ರೆ, ಈ ಎಲ್ಲಾ ಆರೋಪಗಳನ್ನು ಆಸ್ಪತ್ರೆ ಆಡಳಿತ ಮಂಡಳಿ ತಳ್ಳಿ ಹಾಕಿತ್ತು. 'ನಮ್ಮ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿರುವಂತೆ ವಿದ್ಯುತ್ ಸಮಸ್ಯೆಯಿಂದಾಗಿ ಸಾವುಗಳಾಗಿಲ್ಲ. ಅಂದು ಆಸ್ಪತ್ರೆಯಲ್ಲಿ ಕರೆಂಟ್ ಹೋಗಿರೋದು ನಿಜ. ಆದರೆ ಕರೆಂಟ್ ಹೋದ ಮೇಲೂ ವೆಂಟಿಲೇಟರ್ ಸಪ್ಲೈ ಇತ್ತು. ಪಕ್ಕದ ಬೆಡ್‌ಗಳಲ್ಲಿ ಹಲವು ರೋಗಿಗಳಿದ್ದರು. ಅವರಿಗೆ ಯಾವುದೇ ತೊಂದರೆ ಆಗಿಲ್ಲ' ಎಂದು ವಿಮ್ಸ್ ಸೂಪರಿಂಟೆಂಡೆಂಟ್ ಯೋಗೇಶ್ ಹೇಳಿದ್ದರು.
ಪ್ರಕರಣದ ತನಿಖೆಗೆ ಆದೇಶಿಸಿತ್ತು ಸರ್ಕಾರ: ಈ ದುರಂತದ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬಳಿಕ ಎಚ್ಚೆತ್ತುಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತನಿಖೆಗೆ ಆದೇಶ ಮಾಡಿದ್ದಾರೆ. ಡಾ.ಸ್ಮಿತಾ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಈ ಬೆನ್ನಲ್ಲೇ ಇದೀಗ ಮತ್ತೆ ಅಗ್ನಿ ಅವಘಡ ಸಂಭವಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇದನ್ನೂ ಓದಿ: ವಿಮ್ಸ್‌ನ ಐಸಿಯುನಲ್ಲಿ ಸಾವು ಪ್ರಕರಣ.. ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ, ಪರಿಶೀಲನೆ