ಹೊಸಪೇಟೆ (ವಿಜಯನಗರ): ತಾಲೂಕಿನ ಪಾಪಿನಾಯಕಹಳ್ಳಿಯಲ್ಲಿ 20 ಹಾಗೂ ವೆಂಕಟಾಪುರದಲ್ಲಿ 12 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.
ಪಾಪಿನಾಯಕನ ಹಳ್ಳಿಯ ರೈಲು ನಿಲ್ದಾಣದ ಬಳಿ ಎಲೆಕ್ಟ್ರಿಸಿಟಿ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಯ 20 ನೌಕರರು ಸೋಂಕಿಗೆ ತುತ್ತಾಗಿದ್ದಾರೆ. ವೆಂಕಟಾಪುರದಲ್ಲಿ 12 ಜನರಿಗೆ ಪಾಸಿಟಿವ್ ದೃಢಪಟ್ಟಿದೆ.
ಈ ಬಗ್ಗೆ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಮಾತನಾಡಿ, ಜನರು ಹೋಮ್ ಐಸೋಲೇಷನ್ ಮತ್ತು ಹೋಮ್ ಕ್ವಾರಂಟೈನ್ಗೆ ಒಪ್ಪುತ್ತಿಲ್ಲ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ನಾವು ಗ್ರಾಮದಲ್ಲಿ ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಸೊಂಕು ನಿಯಂತ್ರಿಸಲು ಸೋಂಕಿತರ ಸಹಕಾರವೂ ಮುಖ್ಯ. ಹೋಂ ಐಸೋಲೇಷನ್, ಹೋಮ್ ಕ್ವಾರಂಟೈನ್ಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಮಾಸ್ಕ್ ಅಭಿಯಾನ : ಮುಖಗವಸು ಹಾಕದ ವ್ಯಾಪಾರಿಗೆ ಎಸ್ಪಿ ಕಪಾಳಮೋಕ್ಷ
ದಂಡ ಪ್ರಯೋಗ:
ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ, ಹೊಸಪೇಟೆ ತಾಲೂಕು ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಮುನ್ನೆಚ್ಚರಿಕಾ ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸಲು ಸಜ್ಜಾಗಿದೆ. ನಗರದ ಎಪಿಎಂಸಿಯಲ್ಲಿ ಪ್ರತಿನಿತ್ಯ ನೂರಾರು ಜನರು ತರಕಾರಿ ಖರೀದಿಸಲು ಬರುತ್ತಾರೆ. ಇಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ದೂರುಗಳು ಬಂದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ತಾಲೂಕಾಡಳಿತ ದಂಡ ಹಾಕಲು ಮುಂದಾಗಿದೆ.
ತಹಶೀಲ್ದಾರ್ ಎಚ್ಚರಿಕೆ:
ಈ ಬಗ್ಗೆ ತಹಶೀಲ್ದಾರ್ ಎಚ್.ವಿಶ್ವನಾಥ ಪ್ರತಿಕ್ರಿಯಿಸಿ, ಜನರು ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ ಇನ್ನಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.