ಬಳ್ಳಾರಿ: ಸತತ ಮಳೆ ಸುರಿದ ಪರಿಣಾಮ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ನದಿ ತಟದಲ್ಲಿಂದು ಪ್ರವಾಹದ ಭೀತಿ ಎದುರಾಗಿದೆ.
ಗಣಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹೂವಿನ ಹಡಗಲಿ ತಾಲೂಕಿನ ಬ್ಯಾಲ ಹುಣಿಸೆ, ಬನ್ನಿಮಟ್ಟಿ ಹಾಗೂ ಮರಕಬ್ಬಿ ಗ್ರಾಮಗಳ ನದಿ ಪಾತ್ರದಲ್ಲಿ ಜಲಾಶಯದ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿದ್ದರಿಂದ ತಾಲೂಕು ಆಡಳಿತ ನದಿಪಾತ್ರದಲ್ಲಿ ವಾಸಿಸುವ ಜನರಿಗೆ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ.
ಇದಲ್ಲದೇ ಹೊಲ - ಗದ್ದೆಗಳಿಗೂ ಮಳೆ ನೀರು ನುಗ್ಗಿದೆ. ಅಪಾರ ಪ್ರಮಾಣದ ಬೆಳೆ ನಷ್ಟವೂ ಸಂಭವಿಸಿದೆ. ಮುಂಜಾಗ್ರತಾ ಕ್ರಮವಾಗಿ ತೋಟದ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಗ್ರಾಮಸ್ಥರು ಹೋಗುತ್ತಿದ್ದಾರೆ.