ಬಳ್ಳಾರಿ: ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮ ಹೊರವಲಯದಲ್ಲಿ ರೈತ ಸಂಘರ್ಷ ಸಮಿತಿ ಕಾರ್ಯದರ್ಶಿ ಮೇಲೆ ಏಳು ಮಂದಿ ದುಷ್ಕರ್ಮಿಗಳ ತಂಡ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಿರೇಹಡಗಲಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಆರೋಪಿಗಳನ್ನು ಬಂಧಿಸದೆ ಇರೋದಕ್ಕೆ ಸಂತ್ರಸ್ತೆ ಮನನೊಂದು, ಫೇಸ್ಬುಕ್ ಲೈವ್ನಲ್ಲಿ ತನ್ನ ನೋವು ತೋಡಿಕೊಂಡಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ, ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿ ತಿಂಗಳು ಕಳೆದಿದೆ. ಆದರೆ, ಪೊಲೀಸರು ಈವರೆಗೆ ಯಾರನ್ನೂ ಬಂಧಿಸಿಲ್ಲ ಅಂತಾ ಕಣ್ಣೀರು ಹಾಕಿದ್ದಾರೆ. ಆರೋಪಿಗಳೊಂದಿಗೆ ಪೊಲೀಸರು ಶಾಮೀಲಾಗಿದ್ದು, ಅವರನ್ನು ರಕ್ಷಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ನಾನು ರೈತ ಪರ ಹೋರಾಟ ಮಾಡಿದ್ದೀನಿ. ನನಗೆ ಈ ರೀತಿ ಅನ್ಯಾಯವಾಗಿದೆ. ಹಳೆ ದ್ವೇಷದ ಹಿನ್ನೆಲೆ ಈ ಕೃತ್ಯವೆಸಗಿದ್ದಾರೆ ಎಂದು ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.
ಘಟನೆಯ ವಿವರ:
ಸೆಪ್ಟೆಂಬರ್ 5 ರಂದು ಕೊಟ್ಟಿಗೆಯಲ್ಲಿ ಹಸುಗಳಿಂದ ಹಾಲು ಕರೆಯುವಾಗ ಏಳು ಜನ ದುಷ್ಕರ್ಮಿಗಳು ಮಹಿಳೆ ಮೈಮೇಲೆ ಎರಗಿದ್ದಾರೆ. ಆ ವೇಳೆ ಮಹಿಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆಕೆಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ಗಾಯಗೊಂಡಿದ್ದವಳಿಗೆ, ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಈ ಕುರಿತು ಸೆಪ್ಟೆಂಬರ್ 14 ರಂದು ಸಂತ್ರಸ್ತೆ ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಅತ್ಯಾಚಾರಕ್ಕೆ ಯತ್ನ ಎಂಬ ಆರೋಪದಡಿ ಪ್ರಕರಣ ದಾಖಲಿಸಿದ್ದರು.
ಕೇಸು ದಾಖಲಾದವರ ವಿವರ:
1. ಅಂಜಿನಪ್ಪ
2. ಶಿವು ಈರಮ್ಮನವರ್
3. ಹನುಮಂತಪ್ಪ
4. ಸುಭಾಷ್
5. ಬಸಪ್ಪ
6. ಲಕ್ಕಪ್ಪ
7. ಹನುಮಂತ