ಹೊಸಪೇಟೆ (ವಿಜಯನಗರ) : ಆಹಾರ ಇಲಾಖೆ, ಗುತ್ತಿಗೆದಾರನ ಹಗ್ಗ ಜಗ್ಗಾಟದಿಂದ ಜಿಲ್ಲೆಯ ಕೊಟ್ಟೂರು ರೈತರು ಕಂಗಾಲಾಗಿದ್ದು, ಖರೀದಿ ಕೇಂದ್ರದಿಂದ ರಾಗಿ ಸಾಗಿಸಲು ಲಾರಿಗಳು ಬಾರದ ಕಾರಣ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ರಾಗಿ ಬೆಳೆದ ರೈತರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿತ್ತು. ಇದರಿಂದ ರೈತರು ಒಂದಿಷ್ಟು ಲಾಭ ಸಿಗಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಕೊಟ್ಟೂರು ತಾಲೂಕಿನಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ರೈತರು ರಾಗಿ ಬೆಳೆದಿದ್ದಾರೆ. ಬೆಳೆಯನ್ನು ಕಟಾವ್ ಮಾಡಿ ಖರೀದಿ ಕೇಂದ್ರಕ್ಕೆ ತಂದು ಹಲವು ದಿನಗಳಾದರೂ ಯಾರು ಖರೀದಿಗೆ ಮುಂದಾಗುತ್ತಿಲ್ಲ. ಕೊಟ್ಟೂರು ಖರೀದಿ ಕೇಂದ್ರದಿಂದ ರಾಗಿ ಸಾಗಾಟ ಮಾಡಲು ಲಾರಿಗಳು ಬಾರದ ಹಿನ್ನೆಲೆ ರೈತರಿಂದ ರಾಗಿ ಖರೀದಿ ಮಾಡುತ್ತಿಲ್ಲ. ಹೀಗಾಗಿ, ರೈತರು ಟ್ರ್ಯಾಕ್ಟರ್ನೊಂದಿಗೆ ಖರೀದಿ ಕೇಂದ್ರದಲ್ಲೇ ಕಾಯುವಂತಾಗಿದೆ.
ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಲು ಬಂದ 150 ಕ್ಕೂ ಹೆಚ್ಚು ರೈತರು ಹಗರಿಬೊಮ್ಮನಹಳ್ಳಿ ಉಗ್ರಾಣಕ್ಕೆ ಸಾಗಿಸಲು ಲಾರಿಗಳು ಇಲ್ಲದ ಕಾರಣ ನಾಲ್ಕು ದಿನಗಳಿಂದ ಖರೀದಿ ಕೇಂದ್ರದ ಮುಂದೆ ಕಾದು ನಿಂತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಈ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಮಾ.12 ರಿಂದ ಖರೀದಿ ಕೇಂದ್ರ ಆರಂಭಿಸಿದ್ದು, ಏ.15 ರವರೆಗೆ ಮಾರಾಟ ಮಾಡಲು ಅವಕಾಶವಿದೆ. ಒಂದು ಕ್ವಿಂಟಾಲ್ ರಾಗಿಗೆ 3,295 ರೂ. ದರ ನಿಗದಿಪಡಿಸಲಾಗಿದ್ದು, 1,250 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನಿತ್ಯ ಹತ್ತಾರು ವಾಹನಗಳಲ್ಲಿ ರೈತರು ರಾಗಿ ತರುತ್ತಿದ್ದಾರೆ. ಈವರೆಗೆ 12,500 ಕ್ವಿಂಟಾಲ್ ಖರೀದಿಸಲಾಗಿದೆ. ಇನ್ನು 10 ರಿಂದ 15 ಸಾವಿರ ಕ್ವಿಂಟಾಲ್ ರಾಗಿ ಖರೀದಿ ಕೇಂದ್ರಕ್ಕೆ ಬರುವ ನಿರೀಕ್ಷೆ ಇದೆ. ಸದ್ಯ, ರಾಗಿ ತಂದ ರೈತರು ಖರೀದಿ ಕೇಂದ್ರದ ಮುಂದೆ ಕಾಯುತ್ತಿದ್ದಾರೆ.
ಇದನ್ನೂ ಓದಿ: ರೈತರ ಹೋರಾಟ ಇನ್ನೊಂದು ಮಳೆಗಾಲ ಕಳೆದು ಬೇಸಿಗೆ ಆರಂಭವಾದ್ರೂ ಕೈ ಬಿಡಲ್ಲ: ಟಿಕಾಯತ್
ಕೊಟ್ಟೂರಲ್ಲಿ ಉಗ್ರಾಣ ಇಲ್ಲದ್ದರುವುದರಿಂದ ಹಗರಿಬೊಮ್ಮನಹಳ್ಳಿಗೆ ಲಾರಿಗಳ ಮೂಲಕ ಸಾಗಿಸಲು ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನಿಡಲಾಗಿದೆ. ಆದರೆ, ಕಳೆದ ನಾಲ್ಕು ದಿನಗಳಿಂದ ಆತ ಲಾರಿಗಳನ್ನು ಕಳಿಸಿಲ್ಲ. ಹೀಗಾಗಿ 40 ಕ್ಕೂ ಹೆಚ್ಚು ವಾಹನಗಳಲ್ಲಿ ರಾಗಿ ಲೋಡ್ ಮಾಡಿಕೊಂಡು ಬಂದ ರೈತರು, ಖರೀದಿ ಕೇಂದ್ರದ ಮುಂದೆ ಕಾಲ ಕಳೆಯುತ್ತಿದ್ದಾರೆ. ಇವತ್ತು, ನಾಳೆ ಖರೀದಿಸಬಹುದೆಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಯಾರೂ ಇತ್ತ ಗಮನಹರಿಸುತ್ತಿಲ್ಲ. ಈ ಬಗ್ಗೆ ಖರೀದಿ ಕೇಂದ್ರದ ಅಧಿಕಾರಿಗಳನ್ನು ಕೇಳಿದರೆ, ಹಗರಿಬೊಮ್ಮನಹಳ್ಳಿ ಉಗ್ರಾಣದಲ್ಲಿ ರಾಗಿ ಇಳಿಸಿಕೊಳ್ಳಲು ಹಮಾಲರ ಕೊರತೆಯಿಂದ ಸಮಸ್ಯೆಯಾಗಿದೆ ಎಂದು ಸಮಾಜಾಯಿಷಿ ನೀಡುತ್ತಿದ್ದಾರಂತೆ.
ಈ ಕುರಿತು ಈಟಿವಿ ಭಾರತ್ ಜೊತೆ ಕೊಟ್ಟೂರಿನ ಕೃಷಿ ಅಧಿಕಾರಿ ಶ್ಯಾಮ ಸುಂದರ್ ಮಾತನಾಡಿ, ಕೃಷಿ ಕಚೇರಿಯಲ್ಲಿ ರೈತರಿಂದ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಆದರೆ, ಖರೀದಿಯನ್ನು ಆಹಾರ ಇಲಾಖೆ ಮಾಡಿಕೊಳ್ಳುತ್ತದೆ. ರೈತರ ಸಮಸ್ಯೆ ಕುರಿತು ಆಹಾರ ಇಲಾಖೆಯ ಗಮನಕ್ಕೆ ತರಲಾಗುವುದು ಎಂದರು.