ಹೊಸಪೇಟೆ/ಬಳ್ಳಾರಿ: ದಲಿತರು ಈ ದೇಶದ ಮೂಲ ನಿವಾಸಿಗಳು. ಆರ್ಎಸ್ಎಸ್ ರಾಷ್ಟ್ರೀಯ ಅಧ್ಯಕ್ಷ ಬಿ.ಎಲ್. ಸಂತೋಷ ಇತಿಹಾಸವನ್ನು ಸರಿಯಾಗಿ ಮತ್ತೊಮ್ಮೆ ಅಧ್ಯಯನ ಮಾಡಿಕೊಂಡು ಮಾತನಾಡಬೇಕಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದ ಮಾತಂಗ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಬಿ.ಎಲ್. ಸಂತೋಷ್ ಹೇಳಿಕೆಗೆ ಪ್ರತಿಕ್ರಿಯಿಸಿ, ದೇಶದ ಮೂಲ ನಿವಾಸಿಗಳಿಗೆ ವಲಸಿಗರು ಎಂದು ಹೇಳುವುದು ಸರಿಯಲ್ಲ. ಅವರಿಗೆ ಇತಿಹಾಸ ತಿಳಿದಿಲ್ಲ. ಅವರು ಮತ್ತೊಮ್ಮ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಹೇಳಿದ್ರು.
ಮೋದಿ ಸರ್ಕಾರವನ್ನು ಅಂತ್ಯಗೊಳಿಸಲು ಎಲ್ಲರೂ ಪಣತೊಡಬೇಕಿದೆ. ಜಾತಿ-ಜಾತಿಗಳ ಮಧ್ಯೆ ಮತ್ತು ಧರ್ಮ- ಧರ್ಮಗಳ ಮಧ್ಯೆ ಸಾಮರಸ್ಯ ಹಾಳು ಮಾಡುವ ಕೆಲಸ ನಡೆಯುತ್ತಿದೆ. ಎನ್ಆರ್ಸಿ, ಪೌರತ್ವ ಕಾಯ್ದೆಯನ್ನು ಯಾವ ಪುರುಷಾರ್ಥಕ್ಕೆ ತಂದಿದ್ದಾರೆ? ಇದರಿಂದ ಜನರಿಗೆ ಏನು ಲಾಭವಾಗುತ್ತದೆ? ಎಂದು ಅವರು ಪ್ರಶ್ನಿಸಿದ್ರು. ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ. ಅವುಗಳ ಬಗ್ಗೆ ಯಾಕೆ ಕಾಳಜಿಯನ್ನು ತೋರಿಸುತ್ತಿಲ್ಲ? ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿಯಿಲ್ಲ, ದಲಿತರ ಪರವಾಗಿ ಯೋಜನೆಗಳನ್ನು ಜಾರಿ ಮಾಡಿಲ್ಲ, ಸಮಾಜದಲ್ಲಿ ಅಸಮತೋಲನತೆ, ಅಸ್ಪೃಶ್ಯತೆ ಇನ್ನೂ ಹಾಗೆಯೇ ಜೀವಂತವಾಗಿ ಉಳಿದುಕೊಂಡಿದೆ. ಅದರ ಬಗ್ಗೆ ಗಮನ ಹರಿಸಲಿ ಎಂದು ಆರೋಪಿಸಿದ್ರು.