ಬಳ್ಳಾರಿ: ರೈತರು ಲಕ್ಷಾಂತರ ರೂ.ಖರ್ಚು ಮಾಡಿ ಸಂಗ್ರಹಿಸಿಟ್ಟಿರುವ ಭತ್ತದ ಚೀಲಗಳನ್ನು ಗೋದಾಮಿನ ಮಾಲೀಕ ನೀಡದಿರುವ ಕ್ರಮ ಖಂಡಿಸಿ ಇಲ್ಲಿನ ತುಂಗಭದ್ರಾ ರೈತ ಸಂಘದ ಪದಾಧಿಕಾರಿಗಳು ಐಜಿ ಅವರಿಗೆ ದೂರು ನೀಡಿ, ನ್ಯಾಯ ಕಲ್ಪಿಸಿ ಎಂದು ಮನವಿ ಮಾಡಿದರು.
ತುಂಗಭದ್ರಾ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷ ದರೂರು ಪುರುಷೋತ್ತಮ ಗೌಡ ಅವರು ಮಾತನಾಡಿ, ಹೊಸ ಮೋಕಾ ಗ್ರಾಮದ ಕಾರದಪುಡಿ ಮುದ್ದನಗೌಡ ಎನ್ನುವವರಿಗೆ ಸೇರಿದ ಗೋದಾಮಿನಲ್ಲಿ ರೈತರು ಮಾರುಕಟ್ಟೆಯಲ್ಲಿ ದರ ಕಡಿಮೆ ಇದ್ದಾಗ ಭತ್ತದ ಚೀಲಗಳನ್ನು ಸಂಗ್ರಹಿಸಿಟ್ಟಿದ್ದರು. ಇದೀಗ ರೈತರಿಗೆ ಗೋದಾಮಿನ ಮಾಲೀಕ ಭತ್ತದ ಚೀಲಗಳನ್ನು ವಾಪಸ್ ನೀಡುತ್ತಿಲ್ಲ. ಇದನ್ನು ಪ್ರಶ್ನಿಸಿದರೆ ನಾನಾ ನೆಪ ಹೇಳುತ್ತಿದ್ದು, ಕೂಡಲೇ ರೈತರಿಗೆ ನ್ಯಾಯ ಕಲ್ಪಿಸಬೇಕು ಎಂದು ಐಜಿ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ರೈತರಾದ ಶ್ರೀನಿವಾಸ್ ದೇಸಾಯಿ ಮೊಕಾ 325 ಚೀಲಗಳು, ಭೋವಿ ಪೊಂಪನಗೌಡ 395 ಚೀಲ, ಚೆನ್ನಬಸವ 237 ಚೀಲ, ನೆಟ್ಟುಕಂಠಿ 124 ಚೀಲ, ರಾಘು ಅವರಿಗೆ ಸೇರಿದ 300 ಚೀಲ, ಕೆ.ಬಸವರಾಜ್ ಅವರಿಗೆ ಸೇರಿದ 530 ಭತ್ತದ ಚೀಲಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದೆ.
ಸದ್ಯ ಎಲ್ಲಾ ರೈತರು ನಮ್ಮ ಭತ್ತದ ಚೀಲಗಳನ್ನು ಗೋದಾಮಿನಿಂದ ಬಿಡುಗಡೆ ಮಾಡಿ ಎಂದರೆ ಮಾಲೀಕ ನಾನಾ ನೆಪ ಹೇಳಲು ಮುಂದಾಗಿದ್ದಾರೆ. ಕೂಡಲೇ
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯ ಪ್ರವೇಶಿಸಿ ನಮ್ಮ ರೈತರಿಗೆ ಸೇರಿದ ಭತ್ತದ ಚೀಲಗಳನ್ನು ವಾಪಸ್ ಕೊಡಿಸಬೇಕು ಎಂದು ರೈತ ಮುಖಂಡ ಮನವಿ ಮಾಡಿದರು.
ಈ ಸಮಯದಲ್ಲಿ ರೈತ ಮುಖಂಡರಾದ ಹೊಸಳ್ಳಿ ಸುರೇಶ ಗೌಡ, ಜಾಲಿಹಾಳ್ ಶ್ರೀಧರ ಗೌಡ, ಕೊಂಚಗೇರಿ ಮಲ್ಲಪ್ಪ, ಶ್ರೀಧರಗಡ್ಡೆ ವೀರನಗೌಡ, ಗಂಗಾವತಿ ವೀರೇಶ್, ಮುಷ್ಟಗಟ್ಟೆ ಭೀಮನ ಗೌಡ ಸೇರಿದಂತೆ ಅನ್ಯಾಯಕ್ಕೊಳಗಾದ ರೈತರು ಉಪಸ್ಥಿತರಿದ್ದರು.