ಬಳ್ಳಾರಿ: ಮಳೆ ಬಂದು ಹೋದ ನಂತರ ಈರುಳ್ಳಿ ಬೆಳೆಯಲ್ಲಿ ತಿಗಣಿ ರೋಗ ಕಾಣಿಸಿಕೊಂಡಿದ್ದು, ರೋಸಿ ಹೋದ ರೈತರೊಬ್ಬರು ಸಂಪೂರ್ಣವಾಗಿ ಬೆಳೆ ನಾಶ ಮಾಡಿರುವ ಘಟನೆ ಕೊಟ್ಟೂರು ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಕೊಟ್ಟೂರು ತಾಲೂಕಿನ ಕೆ.ಅಯ್ಯನಹಳ್ಳಿಯ ಎ.ಎಂ.ಜಿ.ಕರಿವೀರಯ್ಯ ತನ್ನ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಬೆಳೆಗೆ ತಿಗಣಿ ರೋಗ ತಗುಲಿದ ಪರಿಣಾಮ ಯಾವುದೇ ಬೆಳವಣಿಗೆ ಕಾಣದೆ ಬೆಳೆ ಸಂಪೂರ್ಣ ನಾಶವಾಗಿದೆ.
ಕೀಟನಾಶಕ ಸಿಂಪಡಿಸಿದರೂ ಕೂಡ ರೋಗ ನಿವಾರಣೆಯಾಗುವ ಲಕ್ಷಣ ಕಂಡು ಬಾರದ ಹಿನ್ನೆಲೆ ನಿನ್ನೆ ನೊಂದ ರೈತ ಬೆಳೆಯನ್ನು ಜೋಡೆತ್ತಿನ ಸಹಕಾರದೊಂದಿಗೆ ರಂಟೆ ಹೊಡೆಯುವ ಮೂಲಕ ಕಿತ್ತೆಸೆದಿದ್ದಾನೆ.
ಈರುಳ್ಳಿ ಬೆಳೆಗೆ ಉತ್ತಮ ಬೆಲೆ ದೊರುಕುತ್ತದೆ ಎಂದು ಸಾಲ ಮಾಡಿ ಬಿತ್ತನೆ ಕೈಗೊಂಡಿದ್ದೆ. ಇದೀಗ ಬೆಳೆ ಹಾನಿಯಾಗಿದ್ದು, ಈ ಕುರಿತು ತೋಟಗಾರಿಕೆ ಇಲಾಖಾಧಿಕಾರಿಗೆ ದೂರು ನೀಡಿದ್ದೇನೆ. ಅವರು ಸಹ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಯಾವಾಗ ಪರಿಹಾರ ಸಿಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.