ಹೊಸಪೇಟೆ: ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಲು ಪ್ರಧಾನಿ ನರೇಂದ್ರ ಮೋದಿಯವರು ಮೇ 3 ವರೆಗೆ ಲಾಕ್‌ಡೌನ್ ವಿಸ್ತರಿಸಿದ್ದಾರೆ. ಅವರ ಆದೇಶವನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕೊಟ್ಟರು ಸಂಸ್ಥಾನ ಮಠದ ಡಾ.ಸಂಗನಬಸವ ಸ್ವಾಮೀಜಿ ತಿಳಿಸಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಹಿಂದೆ ವಿಧಿಸಿದ್ದ 21 ದಿನಗಳ ಲಾಕ್ ಡೌನ್ನಿಂದ ಕೊಂಚಮಟ್ಟಿಗೆ ಕೊರೊನಾ ವೈರಸ್ ತಡೆಗಟ್ಟಲಾಗಿದೆ. ಸಂಪೂರ್ಣವಾಗಿ ವೈರಸ್ನಿಂದ ಮುಕ್ತಗೊಳ್ಳಲು ದೇಶದ ಮುಂದಿರುವ ಅತ್ಯಂತ ಪರಿಣಾಮಕಾರಿ ಆಯ್ಕೆಯೆಂದರೆ ಲಾಕ್ ಡೌನ್. ಹಾಗಾಗಿ ಪ್ರಧಾನ ಮಂತ್ರಿಗಳು ಮತ್ತೆ 19 ದಿನಗಳವರೆಗೆ ಲಾಕ್ ಡೌನ್ ವಿಸ್ತರಿಸಿದ್ದಾರೆ. ಇದನ್ನು ನಾವೆಲ್ಲರೂ ಸ್ವಾಗತಿಸಿ ಈ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು. ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿಯೇ ಮಾಡಿ, ಮನೆ ಬಿಟ್ಟು ಹೊರಗಡೆ ತಿರುಗಾಡಬೇಡಿ ಎಂದು ಕರೆ ನೀಡಿದರು.
ಹೊಸಪೇಟೆ-ಬಳ್ಳಾರಿ-ಹಾಲಕೆರೆ ಮತ್ತು ಶಿವಯೋಗ ಮಂದಿರ ಹಾಗೂ ಎಲ್ಲ ಶಾಖಾ ಮಠಗಳಲ್ಲಿ ನಡೆಯಬೇಕಿದ್ದ ಜಾತ್ರೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ. ಎಲ್ಲ ಮಠದ ಸ್ವಾಮೀಜಿಗಳು ಮೊದಲು ಸರ್ಕಾರದ ಆದೇಶವನ್ನು ಪಾಲಿಸಬೇಕಾಗಿದೆ. ಇದರಿಂದ ಅಸಂಖ್ಯಾತ ಭಕ್ತರಿಗೆ ಪ್ರೇರಣೆಯಾಗಲಿದೆ ಎಂದರು.