ಬಳ್ಳಾರಿ : ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಜೆ. ಎನ್ ಗಣೇಶ್ ಅವರಿಗೆ ನೀವು ಕೊಡುವ ಒಂದೊಂದು ಮತ ಕೂಡ ಸಿದ್ದರಾಮಯ್ಯಗೆ ಕೊಟ್ಟ ಹಾಗೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದರು. ಕುರುಗೋಡಿನಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡಿದರು.
ಕಳೆದ ಐದು ವರ್ಷದಲ್ಲಿ ವಿರೋಧ ಪಕ್ಷದಲ್ಲಿ ಇದ್ದರೂ ಕ್ಷೇತ್ರಕ್ಕೆ ಒಂದು ಸಾವಿರ ಕೊಟಿ ಅನುದಾನ ತಂದಿದ್ದಾನೆ ಗಣೇಶ್. ಈ ಬಾರಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಗಣೇಶ್ ಅವರು ಆಡಳಿತ ಪಕ್ಷದ ಶಾಸಕರಾಗುತ್ತಾರೆ. ನಮ್ಮ ಸರ್ಕಾರ ಬಂದ ಮೇಲೆ ಕಂಪ್ಲಿಗೆ ಒಂದಲ್ಲ ಐದು ಸಾವಿರ ಕೋಟಿ ರೂ.ಗಳ ಅನುದಾನವನ್ನು ಕೊಡುತ್ತೇನೆ. ಗಣೇಶ್ ಮಾತು ಕಡಿಮೆ, ನಿಶಬ್ದವಾಗಿ ಜನರ ಕೆಲಸ ಮಾಡುತ್ತಾನೆ. ಹರಾತುರಿ ಶಾಸಕನಲ್ಲ, ನನ್ನ ಮಾತು ಕೇಳಿದ್ದಾನೆ. ನಾನು ಏನ್ ಹೇಳಿದರೂ ಕೇಳುತ್ತಾನೆ ಎಂದು ಸಿದ್ದರಾಮಯ್ಯ ಅವರು ಗಣೇಶ್ ಬಗ್ಗೆ ಗುಣಗಾನ ಮಾಡಿದರು.
ಭಾಷಣದ ಆರಂಭಕ್ಕೂ ಮುನ್ನ; ನಾನು ಹೆಲಿಕಾಪ್ಟರ್ ಇಳಿದಾಗಿನಿಂದ ಬಹಳ ಅದ್ಧೂರಿಯಾಗಿ ಸ್ವಾಗತ ಮಾಡಿದ್ದೀರಿ. ಅದಕ್ಕೋಸ್ಕರ ನಿಮ್ಮೆಲ್ಲರಿಗೂ ಹೃದಯ ತುಂಬಿದ ಧ್ಯವಾದಗಳು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕೂಡಾ ನಾನು ಪ್ರಚಾರಕ್ಕೆ ಬಂದಾಗ ಇದೇ ಉತ್ಸಾಹ ತೋರಿದ್ದೀರಿ. ಕಳೆದ ಬಾರಿ ಗಣೇಶ್ ಅವರನ್ನು ನಿಮ್ಮ ಪ್ರತಿನಿಧಿಯಾಗಿ ವಿಧಾನಸಭೆಗೆ ಕಳಿಸಿದ್ದೀರಿ. ಗಣೇಶ್ ಈ ಬಾರಿ ನೂರಕ್ಕೆ ನೂರರಷ್ಟು ದೊಡ್ಡ ಅಂತರದಿಂದ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಶ್ರೀರಾಮುಲು ಮತ್ತು ಅವರ ಅಳಿಯ, ಕಂಪ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಬಾಬು ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಕಂಪ್ಲಿಯಲ್ಲಿ ಶುಗರ್ ಫ್ಯಾಕ್ಟರಿ ಸರ್ಕಾರದ್ದಾಗಿತ್ತು. ಈಗ ಮಾಜಿ ಶಾಸಕ ಸುರೇಶ್ ಬಾಬು, ಶ್ರೀರಾಮುಲು ಹಾಗೂ ಅವರ ಪತ್ನಿ ಹೆಸರಲ್ಲೇ ಮಾಡಿಸಿಕೊಂಡಿದ್ದಾರೆ. ಅವರ ಶ್ರೀಮತಿ ಭಾಗ್ಯಲಕ್ಷ್ಮಿ ಅವರ ಹೆಸರಿನಲ್ಲಿ ಕಾನೂನು ಬಾಹಿರವಾಗಿ ಶ್ರೀರಾಮುಲು ಕಬ್ಜಾ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಈ ಸಲ ಬಿಜೆಪಿ ನೂರಕ್ಕೆ ನೂರು ಸೋಲುತ್ತದೆ. ಅಷ್ಟೇ ಅಲ್ಲ ಶ್ರೀರಾಮುಲು, ಸುರೇಶ್ ಬಾಬು ಕೂಡ ಸೋಲುತ್ತಾರೆ. ಮೇಲಕ್ಕೆ ಹೋದವರು ಒಂದು ದಿನ ಕೆಳಕ್ಕೆ ಬರಲೇಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯನೋ ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಅಷ್ಟೇ ಸತ್ಯ ಎಂದು ಸಿದ್ದರಾಮಯ್ಯ ಹೇಳಿದರು.
ನಾನು ಸಿಎಂ ಆದಾಗ 160 ಭರವಸೆಯಲ್ಲಿ 150 ಈಡೇರಿಸುವೆ. ಬಿಜೆಪಿ 600 ಭರವಸೆ ಕೊಟ್ಟಿದ್ದರು. ಕೇವಲ 50 ಭರವಸೆ ಈಡೇರಿಸಿದ್ದಾರೆ. ನಾನು ಬಸವಣ್ಣನ ಜಯಂತಿ ದಿನ ಪ್ರಮಾಣವಚನ ಸ್ವೀಕಾರ ಮಾಡಿದ್ದೆ. ಏಕೆಂದರೆ ಬಸವಣ್ಣ ನುಡಿದಂತೆ ನಡೆದರು, ನಾನು ಕೂಡಾ ನುಡಿದಂತೆ ನಡೆಯಬೇಕು ಎಂದು ಪ್ರಮಾಣವಚನ ಸ್ವೀಕಾರ ಮಾಡಿದ್ದೆ. ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡುತ್ತೇವೆ ಎಂದು ಮತ್ತೊಮ್ಮೆ ಸಿದ್ದರಾಮಯ್ಯ ತಿಳಿಸಿದರು. ಇನ್ನು ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್. ಗಣೇಶ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಎಂಎಲ್ ಸಿ ಕೆ.ಎಸ್.ಎಲ್. ಸ್ವಾಮಿ, ಚೊಕ್ಕಬಸನಗೌಡ, ಬಿ.ಎಂ. ಪಾಟೀಲ್. ಕೆ.ಪಿ. ಅಂಜಿನಿ ಮೊದಲಾದವರು ಹಾಜರಿದ್ದರು.
ಇದನ್ನೂ ಓದಿ : ಪತ್ರಕರ್ತರ ಮೇಲೆ ಗೂಂಡಾಗಿರಿ ವರ್ತನೆ ತೋರಿದ ಡಿಕೆಶಿ ವಿರುದ್ಧ ಕ್ರಮ ಕೈಗೊಳ್ಳಿ: ಚು. ಆಯೋಗಕ್ಕೆ ಶೋಭಾ ದೂರು