ಬಳ್ಳಾರಿ: ಕಲ್ಯಾಣ ಕರ್ನಾಟಕ ಭಾಗದ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ನಾನಾ ಪೊಲೀಸ್ ಠಾಣೆಗಳ 9 ಮಂದಿ ಪಿಎಸ್ಐಗಳನ್ನು ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ. ನಂಜುಂಡಸ್ವಾಮಿ ಅವರು ದಿಢೀರನೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬಳ್ಳಾರಿಯ ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಸರಳ.ಪಿ. ಅವರನ್ನು ಹಗರಿಬೊಮ್ಮನಹಳ್ಳಿ (ಅಪರಾಧ) ಪೊಲೀಸ್ ಠಾಣೆಗೆ, ಬಳ್ಳಾರಿ ಡಿಎಸ್ಎ ಘಟಕದ ಪಿಎಸ್ಐ ಶಿವಕುಮಾರ ನಾಯ್ಕ ಅವರನ್ನು ಕೊಪ್ಪಳ ಜಿಲ್ಲೆಯ ಅಳವಂಡಿ ಪೊಲೀಸ್ ಠಾಣೆಗೆ, ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಅವರನ್ನು ಕುಷ್ಟಗಿ ಪೊಲೀಸ್ ಠಾಣೆಗೆ, ರಾಯಚೂರು ಜಿಲ್ಲೆಯ ನೇತಾಜಿನಗರ ಪೊಲೀಸ್ ಠಾಣೆಯ ಪಿಎಸ್ಐ ಶೀಲಾ ಮೂಗನಗೌಡ್ರ ಅವರನ್ನು ಕೊಪ್ಪಳ ಜಿಲ್ಲೆಯ ಬೇವೂರು ಪೊಲೀಸ್ ಠಾಣೆಗೆ, ಬೇವೂರು ಪೊಲೀಸ್ ಠಾಣೆಯ ಪಿಎಸ್ಐ ಎಲ್.ಶಂಕ್ರಪ್ಪ ಅವರನ್ನು ಕೊಪ್ಪಳ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಗೆ, ಬೇವೂರು ಠಾಣೆಗೆ ಪಿಎಸ್ಐ ಟಿ.ಜಿ.ನಾಗರಾಜ ಅವರನ್ನು ಚಿಗಟೇರಿ ಪೊಲೀಸ್ ಠಾಣೆಗೆ, ಕನಕಗಿರಿ ಪೊಲೀಸ್ ಠಾಣೆ ಪಿಎಸ್ಐ ಎಚ್.ಎಸ್.ಪ್ರಶಾಂತ ಅವರನ್ನು ಹಲವಾಗಲು ಪೊಲೀಸ್ ಠಾಣೆಗೆ, ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್ ಅವರನ್ನು ಬಳ್ಳಾರಿ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಗೆ ಹಾಗೂ ಕೊಪ್ಪಳ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಡಿ.ಸುರೇಶ ಅವರನ್ನು ಕನಕಗಿರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ದಿಢೀರ್ ವರ್ಗಾವಣೆ ಏಕೆ?:
ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ಅವರು ಈ ಪಿಎಸ್ಐಗಳನ್ನು ದಿಢೀರ್ ವರ್ಗಾವಣೆ ಮಾಡಲು ಬಹುಮುಖ್ಯ ಕಾರಣವಿದೆ. ಇತ್ತೀಚೆಗೆ ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಅಧಿಕಾರಿಗಳು ಸಭೆಯನ್ನು ಕರೆದಿದ್ದರು. ಈ ವೇಳೆ ಅಕ್ರಮ, ಅನೈತಿಕ ಚಟುವಟಿಕೆ ನಿಯಂತ್ರಣದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಐಜಿಪಿ, ಹಂಪಿ ಡಿವೈಎಸ್ಪಿ ಸೇರಿ ಇತರರ ರಾಜೀನಾಮೆ ಕೇಳಿದ್ದರು. ಆದರೆ, ವಾಸ್ತವವಾಗಿ ಐಜಿಪಿ ಅವರಿಗೆ ರಾಜೀನಾಮೆ ಕೇಳುವ ಹಕ್ಕಿಲ್ಲ. ಅವರದೇನಿದ್ದರೂ ಮಾನವ ಸಂಪನ್ಮೂಲಗಳನ್ನು ಪೂರೈಕೆ ಮಾಡುವುದಷ್ಟೇ ಜವಾಬ್ದಾರಿಯಾಗಿರುತ್ತದೆ. ಹೀಗಾಗಿ, ಐಜಿಪಿ ಅವರ ವರ್ತನೆಗೆ ಬೇಸತ್ತ ಹಂಪಿ ಡಿವೈಎಸ್ಪಿ ಕಾಶೀ ಗೌಡ ರಾಜೀನಾಮೆ ಕೊಡಲು ಮುಂದಾಗಿದ್ದರು. ಅಷ್ಟೇ ಅಲ್ಲದೇ, ಆ ಸಭೆಯಲ್ಲಿ ಪಿಎಸ್ಐಗಳ ಕೊರತೆಯಿದೆ. ಅದನ್ನು ಪೂರೈಸುವಂತೆ ಮೂರು ಜಿಲ್ಲೆಗಳ ಡಿವೈಎಸ್ಪಿಗಳು ಕೋರಿದ್ದರು. ಆದರೆ, ಪಿಎಸ್ಐ ಹುದ್ದೆಗಳನ್ನು ನೇಮಕ ಮಾಡದೇ ದಿಢೀರ್ ವರ್ಗಾವಣೆ ಮಾಡುವುದಕ್ಕೆ ಕೈಹಾಕಿರುವುದು ಕೂಡ ಬಳ್ಳಾರಿ ವಲಯದ ಐಜಿಪಿ ನಂಜುಂಡಸ್ವಾಮಿಯವರ ಅಸಹಾಯಕತೆಯನ್ನು ಎತ್ತಿತೋರಿಸುತ್ತದೆ ಎಂಬ ಮಾತುಗಳು ಇಲಾಖೆಯಲ್ಲಿ ಕೇಳಿಬರುತ್ತಿವೆ.