ಬಳ್ಳಾರಿ: ನಗರದ ವಾರ್ಡ್ಲಾ ಕಾಲೇಜು ಮೈದಾನದ ಸುತ್ತಲೂ ಜನವೋ ಜನ. ನೆರೆದಿದ್ದ ಕಿರಿಯರಿಂದ ಹಿಡಿದು ಹಿರಿಯವರೆಗೂ ಎಲ್ಲರಲ್ಲೂ ಉತ್ಸಾಹ ತುಂಬಿತ್ತು. ಅದರಲ್ಲಿ ಯುವಕ, ಯುವತಿಯರ ಸಂಖ್ಯೆಯೇ ಹೆಚ್ಚಿತ್ತು. ವಿವಿಧ ತಳಿಗಳ ಶ್ವಾನಗಳ ವೈವಿಧ್ಯತೆಯೇ ಅಲ್ಲಿತ್ತು. ಜಿಲ್ಲಾಡಳಿತ, ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಬಳ್ಳಾರಿ ಉತ್ಸವದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಶ್ವಾನ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಶ್ವಾನಗಳು ಸ್ಪರ್ಧಾ ಅಂಕಣದಲ್ಲಿ ಮಾಲೀಕರ ಜತೆ ಅತ್ತಿತ್ತ ಓಡಾಡುತ್ತಿದ್ದ ವಿವಿಧ ತಳಿಯ ಶ್ವಾನಗಳನ್ನು ಕಣ್ತುಂಬಿಕೊಳ್ಳಲು ಅನೇಕರು ಇದೇ ಸಂದರ್ಭದಲ್ಲಿ ಉತ್ಸುಕರಾದರು. ದೇಶ-ವಿದೇಶಗಳ ವಿವಿಧ ಶ್ವಾನ ತಳಿಗಳಿಂದಾಗಿ ಜನಾಕರ್ಷಣೆಯ ಕೇಂದ್ರವಾಯಿತು. ಶ್ವಾನ ಪ್ರದರ್ಶನ ಆರಂಭಕ್ಕೂ ಮುನ್ನ ಅಳುಕುತ್ತಲೇ ಆಕರ್ಷಕ ಮೈಮಾಟದ ಶ್ವಾನಗಳ ಬಳಿ ನಿಂತು ಕೆಲ ಯುವಕ, ಯುವತಿಯರು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
ಮಾಲೀಕರು ಶ್ವಾನಗಳನ್ನು ವಿಶಿಷ್ಟ ಹೆಸರುಗಳಿಂದ ಕರೆಯುತ್ತಾ ಮುದ್ದಿಸುತ್ತಿದ್ದ ದೃಶ್ಯ ಇಲ್ಲಿ ಸಾಮಾನ್ಯವಾಗಿತ್ತು. ಶ್ವಾನಗಳನ್ನು ನೋಡಲಿಕ್ಕಾಗಿ ಜನ ಮುಗಿಬಿದ್ದರು. ಆರು ತಿಂಗಳ ಮರಿಗಳಿಂದ ಹಿಡಿದು ಕೆಲ ದೈತ್ಯಾಕಾರದ ಶ್ವಾನಗಳ ದೇಹದಾಢ್ರ್ಯ ಕಂಡು ಜನ ಹುಬ್ಬೇರಿಸಿದರು. ಮುಧೋಳ, ಗೋಲ್ಡನ್ ರೆಡ್ ರಿವರ್, ಸೈಬೇರಿಯನ್ ಹಸ್ಕಿ, ಹಲಾಸ್ಕ್ ಪೊಮೋರಿಯನ್, ಸೈಂಟ್ ವರ್ನಾಡೋ, ಗ್ರೇಟ್ ಫೆಲ್, ಸೇನ್ ಪಾರ್ಲರ್, ಗೋಲ್ಡನ್ ರಿಟ್ರೀವರ್, ಡ್ಯಾಶ್ ಹೌಡ್, ಗ್ರೇಟ್ ಡೇನ್, ಡಾಬರಮನ್, ಬೀಗಲ್, ಜರ್ಮನ್ ಶಫರ್ಡ್, ರ್ಯಾಟ್ ವಿಲ್ಲರ್, ಅಮೆರಿಕನ್ ಬುಲ್ಲಿ ಡಾಗ್, ಲ್ಯಾಬ್ರಡಾರ್ ರಿಟ್ರೀವರ್, ಪಗ್, ಇಟಾಲಿಯನ್ ಮ್ಯಾಸಕಾಟ್, ಡಾಲ್‍ಮಿಷನ್ ಸೇರಿ ಅನೇಕ ತಳಿಗಳ ಶ್ವಾನಗಳು ನೋಡುಗರ ಮನಸೂರೆಗೊಳಿಸಿದವು.
ಶ್ವಾನ ಪ್ರದರ್ಶನಕ್ಕೂ ಮುನ್ನ ತಪಾಸಣೆ: ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲು ಆಗಮಿಸಿದ ಶ್ವಾನಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಈ ವೇಳೆ ಶ್ವಾನಗಳ ವಿವಿಧ ತಳಿಗಳೂ, ವಯೋಮಿತಿ, ಇತರೆ ಮಾನದಂಡ ಆಧಾರಿಸಿ ಸ್ಪರ್ಧೆಗೆ ಅಣಿಗೊಳಿಸಲಾಯಿತು. ಪಶು ಇಲಾಖೆ ವತಿಯಿಂದ ಸ್ಪರ್ಧೆಗೆ ಆಗಮಿಸಿದ ಶ್ವಾನಗಳಿಗೆ ಬಿಸ್ಲೇರಿ ನೀರು, ಹಾಲು, ಜಂತುಹುಳು ನಿವಾರಣೆ ಮಾತ್ರೆ ಹಾಗೂ ಆಹಾರ ಉಣಿಸುವ ಬೌಲ್‍ಗಳನ್ನು ನೀಡಲಾಯಿತು.
ಪಾಲಿಕ್ಲಿನಿಕ್ ಮುಖ್ಯ ಪಶು ವೈದ್ಯಾಧಿಕಾರಿ ಡಾ.ವಸಂತ್ ಪ್ರಭುರಾಜ್ ಶ್ವಾನ ಆರೋಗ್ಯ ತಪಾಸಣೆ ನಡೆಸಿದರು. ಶ್ವಾನಗಳ ತಳಿಗಳ ಗುಣ, ವಿಧೇಯತೆ, ಮಾಲೀಕರೊಂದಿಗಿನ ಒಡನಾಟ, ಸ್ವಚ್ಛತೆ ನಿರ್ವಹಣೆ ಆಧಾರದ ಮೇಲೆ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.
20ಕೋಟಿ ಮೌಲ್ಯದ ಹೈದರ್ ನೋಡಲು ಮುಗಿಬಿದ್ದ ಜನ: ಬಳ್ಳಾರಿ ಉತ್ಸವದ ವಿಶೇಷ ಮೆರುಗಾಗಿರುವ ಶ್ವಾನ ಪ್ರದರ್ಶನದಲ್ಲಿ ಬೆಂಗಳೂರು ಉದ್ಯಮಿ ಸತೀಶ್ ಅವರ ರಷ್ಯನ್ ಮೂಲದ 100 ಕೆಜಿ ತೂಕದ ರೂ.20ಕೋಟಿ ಮೌಲ್ಯದ ಕಕೇಶಿಯನ್ ಶಫರ್ಡ್ ತಳಿಯ ಶ್ವಾನ ಹೈದರ್ ನೋಡಲು ಜನರು ಮುಗಿಬಿದ್ದರು. ಮಾಲೀಕರೊಂದಿಗೆ ಹವಾನಿಯಂತ್ರಿತ ಐಷಾರಾಮಿ ಕಾರಿನಲ್ಲಿ ಬಂದ ಹೈದರ್ ನೋಡಲು ವಾಡ್ರ್ಲಾ ಮುಖ್ಯ ದ್ವಾರದ ಬಳಿಯೇ ಜನರು ಜಮಾಯಿಸಿದ್ದರು.
ಕಾರಿನ ಕಿಟಕಿಯ ಮೂಲಕ ಹೈದರ್‍ನನ್ನು ನೋಡಿ ಜನರು ಸೋಜಿಗಕ್ಕೆ ಒಳಗಾಗುತ್ತಿದ್ದರು. ಈ ಕಾರಣದಿಂದ ಕಾಲೇಜಿನ ಎದುರಿನ ರಸ್ತೆ ಮಾರ್ಗದಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ವೇದಿಕೆಗೆ ಆಗಮಿಸಿದ ಹೈದರ್‍ನನ್ನು ತಲೆಮುಟ್ಟಿ ಸವರಿ ತಮ್ಮ ಮೊಬೈಲ್‍ನಲ್ಲಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಶ್ವಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರೂಪಿಂದರ್ ಕೌರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ:ಚಿಕ್ಕಮಗಳೂರು ಹಬ್ಬ: 777 ಚಾರ್ಲಿ ಜೊತೆ ಹೆಜ್ಜೆ ಹಾಕಿದ ಶಾಸಕ ಸಿ ಟಿ ರವಿ